ಮಾನಸಿಕ ನೆಮ್ಮದಿಗೆ ಧ್ಯಾನ, ಸಾಹಿತ್ಯದ ಒಡನಾಟ ಅತ್ಯಗತ್ಯ: ಬಿ.ಟಿ.ಕುಮಾರಸ್ವಾಮಿ
ಚಿತ್ರದುರ್ಗ: ಆಧುನಿಕ ಮತ್ತು ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಶಾಂತಿ, ನೆಮ್ಮದಿ ದೊರೆಯಲು ಆಧ್ಯಾತ್ಮಿಕ ಚಿಂತನೆ, ಧ್ಯಾನ, ಯೋಗ ಹಾಗೂ ಸಾಹಿತ್ಯದ ಒಡನಾಟ ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದಲ್ಲಿ ಬುಧವಾರ ಗುರು ಪೌರ್ಣಮಿ ಅಂಗವಾಗಿ ಸಾಹಿತಿ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರ “ಮರ್ತ್ಯದ ವಿಸ್ಮಯ ಮಹದೇವಮ್ಮ” ಹಾಗೂ “ವಸ್ತುವಾಗು ಸಾವಿಲ್ಲದ ಸಾಹಿತ್ಯಕ್ಕೆ” ಎರಡು ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸವಾಲುಗಳಿಂದ ಕೂಡಿದ ಇಂದಿನ ದಿನಗಳಲ್ಲಿ ಜನರ ಬದುಕು ಯಾಂತ್ರಿಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಮುಖಾಮುಖಿಯಾಗುವ ಸಾಹಿತ್ಯ ಕೃತಿಗಳು ಮತ್ತು ಧಾರ್ಮಿಕ ಕ್ಷೇತ್ರಗಳು ಮನುಷ್ಯನಿಗೆ ಮನೋಧೈರ್ಯ ಹಾಗೂ ನೈತಿಕ ಶಕ್ತಿ ತುಂಬುತ್ತವೆ ಎಂದರು.
ಸ್ವಾರ್ಥದ ಯುಗದಲ್ಲಿ ನಿಸ್ವಾರ್ಥ ಸೇವೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಪರೂಪವಾಗುತ್ತಿದೆ. ಕಷ್ಟದಲ್ಲಿರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಧೈರ್ಯ ತುಂಬುವ, ಸೇವೆ ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಒಳಿತಿನ ಹಾದಿಯಲ್ಲಿ ಸಾಗುವ ಕೃತಿಗಳು ಹಾಗೂ ಧಾರ್ಮಿಕ ಚಿಂತನೆಗಳು ನಾಡಿಗೆ ಉತ್ತಮ ಕೊಡುಗೆಯಾಗಿವೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್ ಮಾತನಾಡಿ, ಒಬ್ಬ ಓದುಗ ತನ್ನ ಜ್ಞಾನ ಹೆಚ್ಚಿಸಿಕೊಳ್ಳಲು ಪುಸ್ತಕಗಳನ್ನು ಓದುತ್ತಾನೆ. ಆದರೆ, ಒಬ್ಬ ಲೇಖಕ ಇಡೀ ಸಮಾಜದ ಏಳಿಗೆಗಾಗಿ ಹಾಗೂ ಸಮಾಜಮುಖಿ ಕಾರ್ಯಗಳಿಗಾಗಿ ಪುಸ್ತಕ ಬರೆಯುವ ಮೂಲಕ ತನ್ನ ಜ್ಞಾನವನ್ನು ಸಮಾಜಕ್ಕೆ ವಿಸ್ತರಿಸುತ್ತಾನೆ ಎಂದು ಹೇಳಿದರು.
ಡಾ. ನೆಲ್ಲಿಕಟ್ಟೆ ಸಿದ್ಧೇಶ್ ಅವರು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರಂತರವಾಗಿ ಕೃತಿಗಳನ್ನು ರಚಿಸುತ್ತಿದ್ದಾರೆ. ಸಮಾಜ ಸುಧಾರಣೆ ಹಾಗೂ ಹೊಸ ಪೀಳಿಗೆಗೆ ತಮ್ಮ ಸಾಹಿತ್ಯದ ಮೂಲಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಇಂತಹ ಅನೇಕ ಮೌಲ್ಯಯುತ ಕೃತಿಗಳು ಹೊರಬಂದು, ಸಮಾಜಕ್ಕೆ ಹೆಚ್ಚಿನ ಒಳಿತಾಗಲಿ ಎಂದು ಹಾರೈಸಿದರು.
“ಮರ್ತ್ಯದ ವಿಸ್ಮಯ ಮಹದೇವಮ್ಮ” ಕೃತಿ ಕುರಿತು ಶಿವಮೊಗ್ಗದ ವೈದ್ಯಾಧಿಕಾರಿ ಮತ್ತು ಸಾಹಿತಿ ಡಾ.ನಾಗೇಂದ್ರ ಆಚಾರ್ಯ ಮಾತನಾಡಿದರು. “ವಸ್ತುವಾಗು ಸಾವಿಲ್ಲದ ಸಾಹಿತ್ಯಕ್ಕೆ” ಕೃತಿ ಕುರಿತು ಸಾಹಿತಿ ಹುರುಳಿ ಬಸವರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಳಗಟ್ಟ ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಪೀಠಾಧ್ಯಕ್ಷೆ ಅಮ್ಮ ಮಹದೇವಮ್ಮ, ಕೃತಿಕಾರ, ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಸೇರಿದಂತೆ ಎಂ.ಎಲ್.ಯರ್ರಿಸ್ವಾಮಿ, ಸಿದ್ದಲಿಂಗ ಆಚಾರ್ಯ, ಎಂ.ನಾಗೇಶ್, ಓಬಳೇಶ್, ಶಶಿಧರ್ ಗುಪ್ತ, ಕೃಷ್ಣಮೂರ್ತಿ, ಮಂಜಣ್ಣ ಇದ್ದರು.