ಬೆಂಗಳೂರು: ವಿಧಾನಪರಿಷತ್ (MLC) ಸದಸ್ಯೆಯನ್ನಾಗಿ ಮಾಡಿಸುತ್ತೇನೆ ನಂಬಿಸಿ ಮಂಗಳೂರು ಮೂಲದ ಮಹಿಳೆಯೊಬ್ಬರಿಂದ ಬರೋಬ್ಬರಿ 1.50 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಯರಿಸ್ವಾಮಿ, ಬಸವರಾಜ್ ಹಾಗೂ ಸಿದ್ದರಾಜು ಎಂಬ ಮೂವರು ಆರೋಪಿಗಳ ವಿರುದ್ಧ ಪ್ರಕರಣ (FIR) ದಾಖಲಾಗಿದೆ.
ಖಾಸಗಿ ಟ್ರಸ್ಟ್ ಒಂದರ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನ ಸೇರಿದಂತೆ ಹಲವು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮಂಗಳೂರು ಮೂಲದ ಮಹಿಳೆಗೆ ಯರಿಸ್ವಾಮಿ ಎಂಬಾತನ ಪರಿಚಯವಾಗಿತ್ತು. ತಾನು ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಹೇಳಿಕೊಂಡಿದ್ದ ಆರೋಪಿ, ಪ್ರಭಾವಿ ರಾಜಕಾರಣಿಗಳ ಜೊತೆಗಿರುವ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡಿದ್ದ. ಅಲ್ಲದೆ, "ನೀವು ಇಷ್ಟೊಂದು ಸಮಾಜಸೇವೆ ಮಾಡುತ್ತಿದ್ದೀರಲ್ಲ, ನೀವೇಕೆ MLC ಆಗಬಾರದು? 5 ಕೋಟಿ ರೂಪಾಯಿ ನೀಡಿದರೆ MLC ಮಾಡಿಸಿಕೊಡುತ್ತೇನೆ" ಎಂದು ಆಮಿಷ ಒಡ್ಡಿದ್ದ.
ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಾಗ, ಕೊನೆಗೆ 1.50 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆರೋಪಿ ಯರಿಸ್ವಾಮಿ ತನ್ನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಮೂಲಕ 2024ರ ಆಗಸ್ಟ್ನಿಂದ 2025ರ ಜನವರಿ ಅವಧಿಯಲ್ಲಿ ಹಂತ-ಹಂತವಾಗಿ ಹಣ ಸಂಗ್ರಹಿಸಿದ್ದ. ಮೈಸೂರು ಬ್ಯಾಂಕ್ ವೃತ್ತದ ಬಳಿಯ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯ ಹತ್ತಿರ ಈ ಹಣವನ್ನು ಸ್ವೀಕರಿಸಲಾಗಿತ್ತು.
ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದ ಯರಿಸ್ವಾಮಿ, ಅಲ್ಲಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾಗ ಮಹಿಳೆಯ ಕೊಠಡಿಗೆ ತೆರಳಿ ಆಕೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ವೇಳೆ ತೀವ್ರ ಪ್ರತಿರೋಧ ಒಡ್ಡಿದ ಮಹಿಳೆ, ಕೊಠಡಿಯನ್ನು ಲಾಕ್ ಮಾಡಿಕೊಂಡು ಆತನಿಂದ ರಕ್ಷಣೆ ಪಡೆದುಕೊಂಡಿದ್ದರು.
ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ತಾವು ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಮಹಿಳೆ ಪಟ್ಟು ಹಿಡಿದಾಗ, ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವಂಚನೆಗೊಳಗಾದ ಸತ್ಯ ಅರಿವಾದ ಬಳಿಕ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.