ಮೈಸೂರು: ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್‌ನ್ನು ನುಂಗಿದ ಪರಿಣಾಮ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಮುಕುಂದ್ ಮಯೂರ್ (5) ಎಂದು ಗುರುತಿಸಲಾಗಿದೆ. ಆತ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ಹಾಗೂ ಶಂಕರ್ ನಾಯಕ್ ಅವರ ಮೊಮ್ಮಗ ಹಾಗೂ ಸಂತೋಷ್–ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದ್ದ. ಕುಟುಂಬದವರ ಮಾಹಿತಿ ಪ್ರಕಾರ, ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಗಿಫ್ಟ್ ಬಾಲ್‌ನ್ನು ಆಟವಾಡುವ ವೇಳೆ ಬಾಲಕ ಆಕಸ್ಮಿಕವಾಗಿ ನುಂಗಿದ್ದಾನೆ.
ಪ್ಲಾಸ್ಟಿಕ್ ಬಾಲ್ ಗಂಟಲಿನಲ್ಲಿ ಸಿಲುಕಿದ ಪರಿಣಾಮ ಬಾಲಕ ಉಸಿರುಗಟ್ಟಿ ಅಸ್ವಸ್ಥನಾಗಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ಪ್ರಯತ್ನಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.