ಚಿತ್ರದುರ್ಗ : ಮತದಾರರ ಪಟ್ಟಿಯಿಂದ ಉದ್ದೇಶ ಪೂರ್ವಕವಾಗಿ ನನ್ನ ಹೆಸರನ್ನು ಡಿಲಿಟ್ ಮಾಡಿಸಲು ಫಾರಂ ನಂ. 7 ನ್ನು ಸಲ್ಲಿಸಿರುವ ಚಿತ್ರದುರ್ಗ ತಾಲ್ಲೂಕು ಹಳಿಯೂರು ಗ್ರಾಮದ ನಿವಾಸಿ ರವಿಚಂದ್ರ ಕೆ. ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಚೋಳುಗುಡ್ಡ ಈಶ್ವರನಕಲ್ಲು ದೇವಸ್ಥಾನ ಮುಂಭಾಗದ ವಾಸಿ ಹೆಚ್.ಶಬ್ಬೀರ್ಭಾಷಾ ಸೋಮವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಭಾಗದ ಸಂಖ್ಯೆ :142, ಕ್ರ.ಸಂ. 340, ವಾರ್ಡ್ ನಂ. 11 ರಲ್ಲಿ ಕಳೆದ 28 ವರ್ಷಗಳಿಂದ ಕುಟುಂಬದೊಂದಿಗೆ ವಾಸವಿದ್ದು, ಕಾಂಗ್ರೆಸ್ ಪಕ್ಷದ ಬಿ.ಎಲ್.ಎ. ಟು ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ವಾರ್ಡಿನ ಮತದಾರನೆ ಅಲ್ಲದ ಅಪರಿಚಿತ ವ್ಯಕ್ತಿ ರವಿಚಂದ್ರ ಕೆ. ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಫಾರಂ. ನಂ.7 ಸಲ್ಲಿಸಿದ್ದು, ದುರುದ್ದೇಶದಿಂದ ನೀಡಿರುವ ಈತನ ಅರ್ಜಿಯನ್ನು ಪರಿಗಣಿಸಬಾರದು. ವಾರ್ಡ್ ನಂ.11 ರಲ್ಲಿ ವಾಸವಾಗಿರುವ ನಾನು 2002 ರ ಮತದಾರರ ಪಟ್ಟಿ, ಚುನಾವಣಾ ಆಯೋಗದ ಮ್ಯಾಪಿಂಗ್ ಫಾರಂ, ಗುರುತಿನ ಚೀಟಿ, ಆಧಾರ್ ಕಾರ್ಡ್, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಅಂಕಪಟ್ಟಿ, ಪಾನ್ಕಾರ್ಡ್, ರೇಷನ್ ಕಾರ್ಡ್ ಆದಾಯ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ಗಳನ್ನು ಹೊಂದಿರುತ್ತೇನೆ. ಅಲ್ಪಸಂಖ್ಯಾತನೆನ್ನುವ ಕಾರಣಕ್ಕಾಗಿ ನನ್ನ ಹೆಸರನ್ನು ಮತಪಟ್ಟಿಯಿಂದ ತೆಗೆಸಿ ಹಾಕುವ ಹುನ್ನಾರ ನಡೆಸಿರುವ ರವಿಚಂದ್ರ ಕೆ. ಈತನ ವಿರುದ್ದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಪ್ರಧಾನ ಕಾರ್ಯದರ್ಶಿ ಮಹಮದ್ ಉಸ್ಮಾನ್, ಮೆಹಬೂಬ್ಖಾನ್, ಮುದಸಿರ್ ನವಾಜ್, ಜಮೀರ್ಖಾನ್, ನ್ಯಾಯವಾದಿಗಳಾದ ಸುದರ್ಶನ್ ಬೀಸ್ನಳ್ಳಿ ಜಯಣ್ಣ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.