ಬೆಂಗಳೂರು: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಆಗಸ್ಟ್ 2 ರಂದು ನಡೆಸಿದ್ದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದೆ.
ಅಭ್ಯರ್ಥಿಗಳು ಪಡೆದ ಅಂಕಗಳನ್ನು ಪ್ರಕಟಿಸಲಾಗಿದೆ.
ಈ ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆಗಳು ಏನಾದರು ಇದ್ದರೆ ಆಗಸ್ಟ್ 17ರಂದು ಮಧ್ಯಾಹ್ನ 12.30ರೊಳಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ಪೊಲೀಸ್ ಇಲಾಖೆಯ ಉಳಿಕೆ ಮೂಲ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿರುವ ಬಗ್ಗೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ, ಪೊಲೀಸ್ ಇಲಾಖೆಯ ಉಳಿಕೆ ಮೂಲ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ 02.08.2026 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ದಿನಾಂಕ 03.08.2026 ರಂದು ಪ್ರಕಟಿಸಿ, ಸದರಿ ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 06.08.2026 ಬೆಳಿಗ್ಗೆ 10.30 ರವರೆಗೆ ಕಾಲಾವಕಾಶ ನೀಡಲಾಗಿತ್ತು.
ಈ ಸಂಬಂಧ ಪ್ರಾಧಿಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಗಳ ಮೂಲಕ ಪರಿಶೀಲಿಸಿ, ಪರಿಷ್ಕೃತ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ದಿನಾಂಕ 07.08.2026 ರಂದು ಪ್ರಕಟಿಸಲಾಗಿರುತ್ತದೆ.
ಅದರಂತೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 17.08.2026 ಮಧ್ಯಾಹ್ನ 12.30 ರೊಳಗೆ (https://cetonline.karnataka.gov.in/kea/) ಸಲ್ಲಿಸತಕ್ಕದ್ದು, ಪೂರಕ ದಾಖಲೆಗಳಿಲ್ಲದ ಹಾಗೂ ಕೀ ಉತ್ತರಗಳಿಗೆ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ.