ದಕ್ಷಿಣ ಕನ್ನಡ ಜಿಲ್ಲೆ: ಎಲ್ಲಾ ಶಾಲಾ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಿಗೆ ಇಂದು ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಹೆಚ್.ವಿ. ದರ್ಶನ್ ರಜೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಲ್ಲಿಯೂ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು, ಸೇರಿದಂತೆ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಕಚೇರಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ನಾಗರ ಪಂಚಮಿ ಹಬ್ಬವು ನಾಗ ದೇವತೆಗಳ ಅಥವಾ ಸರ್ಪ ದೇವತೆಗಳ ಆರಾಧನೆಗೆ ಮೀಸಲಾಗಿರುವ ಪ್ರಮುಖ ಹಿಂದೂ ಹಬ್ಬವಾಗಿದೆ. ಶ್ರಾವಣ ಪವಿತ್ರ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬವು ಭಕ್ತಿ, ರಕ್ಷಣೆ, ಪ್ರಕೃತಿಯ ಬಗ್ಗೆ ಗೌರವ ಮತ್ತು ವನ್ಯಜೀವಿಗಳೊಂದಿಗೆ ಶಾಂತಿಯುತ ಸಹಬಾಳ್ವೆಯನ್ನು ನಡೆಸಬೇಕೆಂಬುದನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ನಾಗರ ಪಂಚಮಿ ಅತ್ಯಂತ ಪವಿತ್ರ ಹಾಗೂ ವಿಶೇಷ ಸ್ಥಾನವಿದೆ. ಪರಶುರಾಮ ಸೃಷ್ಟಿಯ ನಾಡು ಎಂದೇ ಗುರುತಿಸಿಕೊಂಡಿರುವ ಈ ಭಾಗದಲ್ಲಿ ನಾಗಾರಾಧನೆಗೆ ಪ್ರಮುಖ ಸ್ಥಾನವಿದೆ. ಪ್ರಕೃತಿ ಹಾಗೂ ದೈವಿಕ ಶಕ್ತಿಯ ಸಂಕಲ್ಪವಾಗಿ ನಾಗರಪಂಚಮಿಯನ್ನು ತುಳುನಾಡಿನಲ್ಲಿ ಆಚರಿಸಲಾಗುತ್ತಿದೆ. ಪ್ರಮುಖ ಆಚರಣೆಯಾಗಿರುವ ಕಾರಣ ಆ.17 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.