ದಸರಾ ಹಬ್ಬದ ನವರಾತ್ರಿಯನ್ನು ಗೊಂಬೆಗಳ ಹಬ್ಬನು ಹೌದು.!
ಚಿತ್ರದುರ್ಗ : ದಸರಾ ಹಬ್ಬದ ನವರಾತ್ರಿಯನ್ನು ಚಿತ್ರದುರ್ಗ ನಗರದ 2 ನೇ ಕ್ರಾಸ್ನ ಲಕ್ಷ್ಮಿ ಕಳೆದ 35 ವರ್ಷಗಳಿಂದಲೂ ನಾನಾ ರೀತಿಯ ಗೊಂಬೆಗಳನ್ನು ತಮ್ಮ ಮನೆಯಲ್ಲಿ ಜೋಡಿಸಿ ಪ್ರತಿನಿತ್ಯವೂ ಪೂಜೆ ಸಲ್ಲಿಸುವುದಲ್ಲದೆ ಸುತ್ತಮುತ್ತಲಿನ ಯಾರೆ ಗೊಂಬೆಗಳನ್ನು ನೋಡಲು ಬಂದರೂ ಪ್ರಸಾದವನ್ನು ಕೈಗಿಟ್ಟು ಕಳಿಸುವ ವಾಡಿಕೆ ಮೊದಲಿನಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ದಶಾವತಾರ, ನವದುರ್ಗಿ, ಕೃಷ್ಣ ಬೆಣ್ಣೆ ಕದಿಯುವುದು, ಮೈಸೂರು ದಸರಾದಲ್ಲಿ ಆನೆ ಅಂಬಾರಿ ಹೊರುವುದು, ಅರಮನೆ, ಅಷ್ಟಲಕ್ಷ್ಮಿ, ಪಾಂಡುರಂಗ ವಿಠಲ, ಪುರಿ
ಜಗನ್ನಾಥ ರಥಯಾತ್ರೆ, ನವನರಸಿಂಹ, ಚನ್ನಪಟ್ಟಣದ ಗೊಂಬೆ, ಚಿತ್ರದುರ್ಗದ ಹೆಸರಾಂತ ಮಿರ್ಚಿ ಮಂಡಕ್ಕಿ ಅಂಗಡಿ, ಪಾನಿಪುರಿ, ಕಾಂತಿ ಸ್ವೀಟ್ಸ್, ಭಾರತದ ವಧುಗಳು, ಬ್ಯಾಂಡ್ ಸೆಟ್, ಅಂಗಡಿ ಮಳಿಗೆಗಳು, ಮದುವೆ, ಆರತಕ್ಷತೆ, ಸೀಮಂತ, ನಾಮಕರಣ, ಮಕ್ಕಳಿಗೆ ಕಿವಿ ಚುಚ್ಚುವುದು, ಶಾಲೆ, ಪಾರ್ಕ್, ಟೈಲರಿಂಗ್, ಹೋಟೆಲ್, ದೈನಂದಿನ ದಿನಚರಿ, ಕುಶಲ ಕರ್ಮಿಗಳು, ನಾನಾ ಬಗೆಯ ಕಸುಬುಗಳು, ಮಣಿ, ಪಿಂಗಾಣಿ, ಹಿತ್ತಾಳೆ, ಬಳಪದ ಕಲ್ಲು, ಮಣ್ಣು ಹೀಗೆ ನಾಲ್ಕೂ ನೂರಕ್ಕು ಹೆಚ್ಚು ಬಗೆಯ ಗೊಂಬೆಗಳು ಪ್ರದರ್ಶನದಲ್ಲಿ ಆಕರ್ಷಿಸುತ್ತಿವೆ. ದಿನಕ್ಕೆ ನೂರಾರು ಮಹಿಳೆಯರು ಇವರ ಮನೆಗೆ ಧಾವಿಸಿ ನವರಾತ್ರಿ ಬೊಂಬೆಗಳನ್ನು ನೋಡಿ ಲಕ್ಷ್ಮಿ ಹಾಗೂ ಅವರ ಕುಟುಂಬದವರ ಪರಿಶ್ರಮವನ್ನು ಹಾಡಿ ಹೊಗಳುತ್ತಿದ್ದಾರೆ.
ಬೆಂಗಳೂರು, ತಿರುಪತಿ, ಮೈಸೂರು, ಶ್ರೀರಂಗಪಟ್ಟಣ, ಚನ್ನಪಟ್ಟಣದಿಂದ ಸಾಕಷ್ಟು ಗೊಂಬೆಗಳನ್ನು ಖರೀಧಿಸಿ ತಂದು ಜೋಪಾನವಾಗಿಟ್ಟುಕೊಂಡು ಪ್ರತಿ ವರ್ಷವೂ ನವರಾತ್ರಿಯಂದು ಹೊರ ತೆಗೆದು ಜೋಡಿಸಲಾಗುವುದು. ಚಿತ್ರದುರ್ಗದಲ್ಲಿ ನಡೆಯುವ ಶರಣ ಸಂಸ್ಕøತಿ ಉತ್ಸವ, ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸಮಯದಲ್ಲಿಯೂ ಅಲ್ಲಿ ಕಣ್ಣಿಗೆ ಕಾಣುವ ವಸ್ತುಗಳನ್ನು ಕೊಂಡುಕೊಂಡು ಗೊಂಬೆ ಪ್ರದರ್ಶನದಲ್ಲಿ ಅಲಂಕರಿಸುತ್ತೇವೆ. ರಾಮ, ಶಿವನ ಪರಿವಾರ, ಪಟ್ಟದ ಗೊಂಬೆ, ಕಳಸ, ಶ್ರೀನಿವಾಸ ಕಲ್ಯಾಣ ಹೀಗೆ ತರಹೆವಾರಿ ಬೊಂಬೆಗಳನ್ನು ಪ್ರದರ್ಶಿಸಿದ್ದೇವೆ. ಮುಂದಿನ ನವರಾತ್ರಿಗೆ ತಿರುಪತಿ, ಮಂತ್ರಾಲಯ ಸೆಟಪ್ ಮಾಡಬೇಕೆಂದುಕೊಂಡಿದ್ದೇವೆ. ಮನೆ, ಕುಟುಂಬ, ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಸಮಯ ಸಿಕ್ಕಾಗ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದರ ಹಿಂದೆ ಎಂಟು ದಿನಗಳ ಪರಿಶ್ರಮವಿದೆಯೆಂದು ಲಕ್ಷ್ಮಿರವರ ಪುತ್ರಿ ಶ್ರಿಪ್ರಿಯ ತಮಗಾದ ಅನುಭವವನ್ನು ಹಂಚಿಕೊಂಡು ಈ ಸಿದ್ದತೆಗೆ ಭಾರತಿ ಕೂಡ ನಮ್ಮ ಜೊತೆಯಲ್ಲಿದ್ದಾರೆಂದು ಸ್ಮರಿಸಿದರು.
ನಮ್ಮ ಅಜ್ಜಿ, ಅಮ್ಮ ಇವರುಗಳು ಚಿಕ್ಕದಾಗಿ ಆರಂಭಿಸಿದ ನವರಾತ್ರಿ ಗೊಂಬೆ ಪ್ರದರ್ಶನವನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಪುರಾಣ ಕಾಲದ ಗೊಂಬೆಗಳ ಇತಿಹಾಸ ಸಾರುವ ಮಾದರಿಗಳನ್ನು ಜೋಡಿಸಿದ್ದೇವೆ. ನವರಾತ್ರಿಯ ಸಂದರ್ಭದಲ್ಲಿ ತಿರುಪತಿಯಲ್ಲಿ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರುವುದರಿಂದ ಈ ರೀತಿಯ ಬೊಂಬೆಗಳ ಪ್ರದರ್ಶನಕ್ಕೆ ವಿಶೇಷವಾದ ಅರ್ಥವಿರುತ್ತದೆ. ವರ್ಷದಿಂದ ವರ್ಷಕ್ಕೆ ಗೊಂಬೆಗಳ ಪ್ರದರ್ಶನದ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಈ ರೀತಿಯ ಗೊಂಬೆಗಳನ್ನು ಪ್ರದರ್ಶಿಸುವವರು ತುಂಬಾ ವಿರಳ. ಇದು ಇಷ್ಟಕ್ಕೆ ನಿಲ್ಲಬಾರದು. ನಮ್ಮ ಮುಂದಿನ ಪೀಳಿಗೆ ಇದನ್ನು ಮುಂದುವರೆಸಿಕೊಂಡು ಹೋಗಲಿ ಎನ್ನುವುದು ನನ್ನ ಆಸೆ ಎಂದು ಲಕ್ಷ್ಮಿರವರು ತಮ್ಮ ಇಂಗಿತ ವ್ಯಕ್ತಪಡಿಸಿದರು.
ನವರಾತ್ರಿಯ ಗೊಂಬೆ ಪ್ರದರ್ಶನದಲ್ಲಿ ಐದು ದಿನ ಶ್ರೀನಿವಾಸ ಕಲ್ಯಾಣ. ಪ್ರತಿದಿನ ಸಂಜೆ ಅರ್ಧ ಗಂಟೆಗಳ ಕಾಲ ಭಜನಾ ಮಂಡಳಿಗಳಿಂದ ಭಜನೆಯಿರುತ್ತದೆ. ನವರಾತ್ರಿ ಮುಗಿದ ನಂತರ ಒಂದೊಂದು ಗೊಂಬೆಯನ್ನು ಬಟ್ಟೆಯಲ್ಲಿ ಸುತ್ತಿ ಮುಕ್ಕಾಗದಂತೆ ಹಳೆ ಕಾಲದ ಟ್ರಂಕ್ನಲ್ಲಿ ಜೋಪಾನವಾಗಿಟ್ಟು ಮತ್ತೆ ನವರಾತ್ರಿಗೆ ಹೊರ ತೆಗೆದು ಜೋಡಿಸುವುದು ನಮಗೆ ಸವಾಲಿನ ಕೆಲಸ ಎಂದು ಲಕ್ಷ್ಮಿ ತಮ್ಮ ಅನುಭವ ಹಂಚಿಕೊಂಡರು.