ನವದೆಹಲಿ: ರೈತರ ಹಿತರಕ್ಷಣೆ ಮತ್ತು ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಿಂಗಾರು (ರಬಿ) ಹಂಗಾಮಿನ 6 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಗೋದಿ, ಕಡಲೆ, ಸಾಸಿವೆ, ಬಾರ್ಲಿ, ಚನ್ನಂಗಿ ಬೇಳೆ (ಮಸೂರ್ ದಾಲ್) ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಕ್ವಿಂಟಾಲ್‌ಗೆ ಅನುಗುಣವಾಗಿ ಬೆಂಬಲ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಈ ನಿರ್ಧಾರದಿಂದ ದೇಶದ ಲಕ್ಷಾಂತರ ರೈತರಿಗೆ ನೇರ ಅನುಕೂಲವಾಗಲಿದೆ.
ಪರಿಷ್ಕೃತ ದರಗಳ ಪ್ರಕಾರ, ಸೂರ್ಯಕಾಂತಿ ಬೀಜ ಮತ್ತು ಸಾಸಿವೆ ಬೆಳೆಗಳಿಗೆ ಗರಿಷ್ಠ ಪ್ರಮಾಣದ ಬೆಲೆ ಏರಿಕೆ ಮಾಡಲಾಗಿದೆ. ಸೂರ್ಯಕಾಂತಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 675 ರೂ. ಏರಿಸಲಾಗಿದ್ದು, ನೂತನ ಬೆಲೆ 6,540 ರೂ.ಗೆ ತಲುಪಿದೆ. ಅದೇ ರೀತಿ ಸಾಸಿವೆ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 413 ರೂ. ಹೆಚ್ಚಿಸಿದ್ದು, ಪ್ರಸ್ತುತ ಬೆಲೆ 6,613 ರೂ. ಆಗಿದೆ. ಇನ್ನು ಚನ್ನಂಗಿ ಬೇಳೆ ಬೆಲೆಯನ್ನು ಕ್ವಿಂಟಲ್‌ಗೆ 390 ರೂ. ಏರಿಸಲಾಗಿದ್ದು, ಹೊಸ ದರ 7,390 ರೂ. ತಲುಪಿದೆ.
ಮತ್ತೊಂದೆಡೆ, ಧಾನ್ಯಗಳು ಮತ್ತು ಬೇಳೆಕಾಳುಗಳ ಬೆಲೆಯಲ್ಲೂ ಗಮನಾರ್ಹ ಏರಿಕೆಯಾಗಿದೆ. ಬಾರ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 136 ರೂ. ಹೆಚ್ಚಿಸಲಾಗಿದ್ದು, ಹೊಸ ಬೆಲೆ 2,286 ರೂ. ಆಗಿದೆ. ಕಡಲೆ ಬೆಂಬಲ ಬೆಲೆಯನ್ನು 83 ರೂ. ಹೆಚ್ಚಿಸುವುದರೊಂದಿಗೆ ಕ್ವಿಂಟಾಲ್‌ಗೆ 5,958 ರೂ. ನಿಗದಿಪಡಿಸಲಾಗಿದೆ. ಇನ್ನು ದೇಶದ ಪ್ರಮುಖ ಆಹಾರ ಬೆಳೆಯಾದ ಗೋಧಿ ಮೇಲಿನ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 25 ರೂ. ಹೆಚ್ಚಿಸಲಾಗಿದ್ದು, ಇನ್ಮುಂದೆ ಕ್ವಿಂಟಾಲ್ ಗೋಧಿಗೆ 2,610 ರೂ. ಸಿಗಲಿದೆ. ಈ ಎಲ್ಲಾ ಬೆಳೆಗಳ ಬೆಂಬಲ ಬೆಲೆ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ಒಟ್ಟು 90,962 ಕೋಟಿ ರೂ. ವಿನಿಯೋಗಿಸುವ ನಿರೀಕ್ಷೆಯಿದೆ.