ತುಮಕೂರು :ನೂರಾರು ಪ್ರತಿಭಾವಂತ ಕಲಾವಿದರ ಬೀಡಾಗಿದ್ದು, ಇಲ್ಲಿನ ಕಲಾವಿದರ ಕೃತಿಗಳ ಪ್ರದರ್ಶನ ಹಾಗೂ ಕಲಾ ಚಟುವಟಿಕೆಗಳಿಗೆ ಪೂರಕವಾಗಿ ಒಂದು ಶಾಶ್ವತವಾದ ಕಲಾ ಗ್ಯಾಲರಿಯ ಅಗತ್ಯವಿದೆ" ಎಂದು ಹಿರಿಯ ಸಾಹಿತಿ ಹಾಗೂ ಚಿಂತಕ ಎಸ್. ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಆಲದಮರದ ಪಾರ್ಕ್‌ನಲ್ಲಿರುವ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಕಲ್ಚರಲ್ ವ್ಯಾಲಿ ಟ್ರಸ್ಟ್ (ರಿ.) ಹಾಗೂ ವಾಲಾಜಿ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕಲಾ ನಕ್ಷತ್ರಗಳು - ಚಿತ್ರಕಲಾವಿದರ ಪರಿಚಯ ಮಾಲಿಕೆ-1’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಮ್ಮ ನಡುವಿನ ಹಿರಿಯ ಮತ್ತು ಸಮಕಾಲೀನ ಚಿತ್ರಕಲಾವಿದರ ಬದುಕು ಹಾಗೂ ಸಾಧನೆಯನ್ನು ದಾಖಲಿಸುವ ‘ಕಲಾ ನಕ್ಷತ್ರಗಳು’ ಕೃತಿಯನ್ನು ರಚಿಸಿದ ಕೋಟೆ ಕುಮಾರ್ ಮತ್ತು ಸಿಹಿಜೀವಿ ವೆಂಕಟೇಶ್ವರ ಅವರ ಕಾರ್ಯ ಅತ್ಯಂತ ಸ್ತುತ್ಯಾರ್ಹವಾದುದು ಎಂದು ಅವರು ಶ್ಲಾಘಿಸಿದರು.
ಕಲಾ ಮೀಮಾಂಸೆಯನ್ನು ಕುರಿತಾದ ಪುಸ್ತಕಗಳು ಕನ್ನಡದಲ್ಲಿ ತೀರಾ ಅಪರೂಪ. ಹಾಗೆಂದ ಮಾತ್ರಕ್ಕೆ ಕನ್ನಡಿಗರಿಗೆ ಕಲಾ ಪ್ರಜ್ಞೆ ಇಲ್ಲವೆಂದಲ್ಲ. ಅಥವಾ ಅಂತಹ ಪುಸ್ತಕಗಳು ಕನ್ನಡದಲ್ಲಿ ಇಲ್ಲವೆನ್ನುವುದು ನಿರಾಶಾದಾಯಕವಾದ ಸಂಗತಿಯೇನೂ ಅಲ್ಲ. ಯಾಕೆಂದರೆ ಕಲೆಯ ಬಗೆಗೆ ಖಚಿತವಾಗಿ ಮಾತನಾಡುವುದು ಸಾಧ್ಯವಿಲ್ಲವೆಂದಾಗ ಪುಸ್ತಕಗಳು ಇಲ್ಲದಿರುವುದು ಆಶ್ಚರ್ಯಕರವೇನಲ್ಲ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾವಿದ ಹಾಗೂ ಕೃತಿಯ ಸಂಪಾದಕ ಕೋಟೆ ಕುಮಾರ್, ಈ ಕೃತಿಯ ರಚನೆ ಹಾಗೂ ಪ್ರಕಟಣೆಗೆ ಸಹಕರಿಸಿದ ಎಲ್ಲಾ ಕಲಾವಿದರಿಗೆ, ಸಾಹಿತಿಗಳಿಗೆ ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಕೃತಿಯ ಮತ್ತೋರ್ವ ಸಂಪಾದಕರಾದ ಸಿಹಿಜೀವಿ ವೆಂಕಟೇಶ್ವರ ಅವರು ಕೃತಿಯ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕೃತಿಯಲ್ಲಿ ಪರಿಚಯಿಸಲ್ಪಟ್ಟ ಕಲಾವಿದರಾದ ಅಶೋಕ್, ಕೆ. ಎನ್. ಮನು ಚಕ್ರವರ್ತಿ, ನರಸಿಂಹ ಮೂರ್ತಿ, ಪ್ರಭು ಹರಸೂರ್, ಕೆ. ಸಿ. ಎಸ್. ಪ್ರಸನ್ನ, ರೇಣುಕಾ ಕೆಸರಮಡು ಹಾಗೂ ಎಂ. ಎಸ್. ಶಿವರುದ್ರಯ್ಯ ಅವರು ಉಪಸ್ಥಿತರಿದ್ದರು.
ಕ್ಯಾತ್ಸಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎನ್‌ಎಲ್ ಸರಸ್ವತಿ, ಶಿಕ್ಷಕರಾದ ಸುರೇಶ,ರಂಗನಾಥ್ ರಾಕೇಶ್ ಹೆಚ್ ಆರ್ ರಂಗಸ್ವಾಮಯ್ಯ, ರಾಜೇಶ್ವರಿ ಉಪಸ್ಥಿತರಿದ್ದರು.
ಕೋಟೆ ಕುಮಾರ್ ಹಾಗೂ ಸಿಹಿಜೀವಿ ವೆಂಕಟೇಶ್ವರ ಅವರ ಬಂಧು ಬಳಗದವರು ಆಗಮಿಸಿ ಶುಭಕೋರಿ ಅಭಿನಂದಿಸಿದರು.
ಸಮಾರಂಭದ ಅಂಗವಾಗಿ ಕರ್ನಾಟಕ ವಿಕಾಸ ರಂಗದ ಶ್ರೀನಿವಾಸ್ ಕುಂಬಾರ್, ಮಹದೇವಪ್ಪ, ಹುಲಿಕುಂಟೆ ಮಂಜುನಾಥ್ ಹಾಗೂ ಮೋಹನ್ ಜಾದೂಗಾರ್ , ಶಿಲ್ಪಿ ವಿಶ್ವನಾಥ್ ಅವರು ಸುಶ್ರಾವ್ಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಲಾವಿದ ನರಸಿಂಹ ಮೂರ್ತಿ ಸ್ವಾಗತಿಸಿದರೆ, ಕಲಾವಿದ ಪ್ರಭು ಹರಸೂರ್ ವಂದನಾರ್ಪಣೆ ನೆರವೇರಿಸಿದರು.