ಹಾವೇರಿ : ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ದೇವರಗುಡ್ಡ ಶ್ರೀ ಮಾಲತೇಶ (ಮೈಲಾರಲಿಂಗೇಶ್ವರ) ಸ್ವಾಮಿ ಕ್ಷೇತ್ರದ ವಾರ್ಷಿಕ ಕಾರ್ಣಿಕೋತ್ಸವವು ಅತ್ಯಂತ ಭಕ್ತಿ-ಶ್ರದ್ಧೆ ಹಾಗೂ ಸಂಭ್ರಮದಿಂದ ಜರುಗಿತು.
ಈ ಧಾರ್ಮಿಕ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವಿಷ್ಯ ನುಡಿಯುವ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನುಡಿದ ದೈವವಾಣಿಯು ರಾಜ್ಯಾದ್ಯಂತ ಭಾರೀ ಕುತೂಹಲ ಮೂಡಿಸಿದೆ. ಈ ಬಾರಿಯ ಕಾರ್ಣಿಕ ನುಡಿಯಾಗಿ "ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತಲೇ ಪರಾಕ್" ಎಂದು ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ನಾಡಿನ ಮುಂಬರುವ ರಾಜಕೀಯ ಬೆಳವಣಿಗೆಗಳು ಮತ್ತು ಪ್ರಾಕೃತಿಕ ಬದಲಾವಣೆಗಳ ಮುನ್ಸೂಚನೆಯಾಗಿರುವ ಈ ದೈವವಾಣಿಯ ಸಾಂಕೇತಿಕ ಅರ್ಥವನ್ನು ಕ್ಷೇತ್ರದ ಅರ್ಚಕರು ಹಾಗೂ ವಿದ್ವಾಂಸರು ಆಳವಾಗಿ ವಿಶ್ಲೇಷಿಸಿದ್ದಾರೆ. ಮೊದಲನೆಯದಾಗಿ, ರಾಜಕೀಯ ಮತ್ತು ರಾಷ್ಟ್ರೀಯ ನಾಯಕತ್ವದ ದೃಷ್ಟಿಯಿಂದ 'ಕೆಂಪುಕೋಟೆ' ಎಂಬುದು ದೆಹಲಿಯ ಅಧಿಕಾರದ ಕೇಂದ್ರಬಿಂದುವನ್ನು ಪ್ರತಿನಿಧಿಸುತ್ತದೆ. 'ಮುತ್ತು' ಎಂದರೆ ಅತ್ಯಮಲ್ಯವಾದ ಹಾಗೂ ಶ್ರೇಷ್ಠ ವ್ಯಕ್ತಿಗಳು ಎಂದರ್ಥವಾಗಿದ್ದು, ಮುಂಬರುವ ದಿನಗಳಲ್ಲಿ ದೇಶದ ಆಡಳಿತ ಅಥವಾ ರಾಜಕೀಯ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಹಿನ್ನೆಲೆಯುಳ್ಳವರು ಅಥವಾ ಸಾಧು-ಸಂತರು ಪ್ರಮುಖ ಪಾತ್ರ ವಹಿಸುವ ಅಥವಾ ಉನ್ನತ ಸ್ಥಾನಕ್ಕೇರುವ ಸುಳಿವನ್ನು ಈ ನುಡಿ ನೀಡುತ್ತದೆ ಎಂದು ಹೇಳಲಾಗುತ್ತದೆ.!