ಚಿತ್ರದುರ್ಗ : ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಬ್ಬರು ದಿನನಿತ್ಯದ ಜೀವನದಲ್ಲಿ ಕನ್ನಡವನ್ನು ಬಳಸುವಂತಾದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡ ಶಕ್ತಿಶಾಲಿಯಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ತಿಳಿಸಿದರು.
ಕನ್ನಡ ರಾಜ್ಯೋತ್ಸವ ನಿಮಿತ್ತ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕನ್ನಡಾಂಬೆ ಫೋಟೋಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನವೆಂಬರ್ ಕನ್ನಡಿಗರಾಗಬಾರದು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ದರಾಗಬೇಕೆಂದು ತಿಳಿಸಿದರು.
ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್ ಮಾತನಾಡಿ ಕರ್ನಾಟಕ ಏಕಿಕರಣಕ್ಕೂ ಮೊದಲು ಹಲವು ಭಾಗಗಳು ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದ ನಮ್ಮ ಪ್ರದೇಶಗಳನ್ನು ಒಂದು ಗೂಡಿಸಿ ಅಖಂಡ ಕರ್ನಾಟಕವನ್ನಾಗಿಸಲು ಅನೇಕ ಹಿರಿಯರ ಶ್ರಮವಿದೆ. ಕರ್ನಾಟಕದಲ್ಲಿ ಕನ್ನಡವೆ ಸಾರ್ವಭೌಮವಾಗಬೇಕು. ಜೊತೆಗೆ ಬೇರೆ ಭಾಷೆಗಳನ್ನು ಕಲಿತರೆ ತಪ್ಪೇನಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಮಾತನಾಡುತ್ತ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಬಲವಾಗಬೇಕು. ಆಂಗ್ಲ ವ್ಯಾಮೋಹಕ್ಕೆ ಸಿಲುಕಿ ಪೋಷಕರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲು ಸರ್ಕಾರಿ ಶಾಲೆಗಳಿಗೆ ದಾಖಲಿಸಿದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಬಹುದು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆಯಾದಾಗ ಕನ್ನಡಿಗರು ಹೋರಾಟಕ್ಕೆ ಇಳಿಯಬೇಕು. ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡ ಮಾತ್ರ. ಅದಕ್ಕಾಗಿ ಕನ್ನಡಿಗರಾದ ನಾವುಗಳೆಲ್ಲಾ ಭಾಗ್ಯಶಾಲಿಗಳು ಎಂದು ಸಂತಸ ವ್ಯಕ್ತಪಡಿಸಿದರು.
ಮುದಸಿರ್ ನವಾಜ್, ಸೈಯದ್ ಮೋಹಿದ್ದೀನ್, ಕಾಂಗ್ರೆಸ್ ಜವಾಹರ್ ಬಾಲ್ಮಂಚ್ ವಿಭಾಗದ ಜಿಲ್ಲಾಧ್ಯಕ್ಷ ಜಿ.ದಾದಾಪೀರ್, ಮುನಿರಾ ಎ.ಮಕಾಂದಾರ್, ಅರ್ಪಿತ, ಬಸಮ್ಮ ಇನ್ನು ಅನೇಕರು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.