ಚಿತ್ರದುರ್ಗ : ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿಗೆ ರಾಜ್ಯ ಸರ್ಕಾರ ಟೆಂಡರ್ ಕರೆದಿರುವುದನ್ನು ಕೂಡಲೆ ನಿಲ್ಲಿಸಬೇಕು. ಇಲ್ಲವಾದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಬಜರಂಗದಳದ ಪ್ರಭಂಜನ್ ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮದ ಆಧಾರದ ಮೇಲೆ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿರುವುದು ದೇಶದ ಭದ್ರತೆಗೆ ಧಕ್ಕೆಯಾಗಲಿದೆ. 60 ದಿನಗಳ ಸೇನಾ ತರಬೇತಿಗೆ ಮುಂದಾಗಿರುವುದು ಆಘಾತಕಾರಿ. ಇದರಿಂದ ಸಂವಿಧಾನದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಹಾಗೇನಾದರೂ ಸೇನೆಗೆ ತರಬೇತಿ ನೀಡುವುದಾದರೆ ಎಲ್ಲಾ ಧರ್ಮದವರಿಗೂ ಕೊಡಲಿ, ಪ್ರತ್ಯೇಕವಾಗಿ ಅಲ್ಪಸಂಖ್ಯಾರಿಗೆ ಮಾತ್ರ ಏಕೆ ಎಂದು ಪ್ರಶ್ನಿಸಿದರು.?
ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುತ್ತದೆನ್ನುವುದು ನಮ್ಮ ಗಮನಕ್ಕೆ ಬಂದಿದೆ. ಗೋ ಕಳ್ಳರಿಗೆ ಇದು ಅಭಯ ಹಸ್ತ ನೀಡಿದಂತಾಗುತ್ತದೆ. ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಯಥಾಸ್ಥಿತಿಯಿರಬೇಕು. ದುರ್ಬಲಗೊಳಿಸುವುದಾಗಲಿ, ಹಿಂದಕ್ಕೆ ಪಡೆಯುವುದಾಗಲಿ ಮಾಡಬಾರದು. ಮತಾಂತರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ಕೈಬಿಡಿ. ಇಲ್ಲವೆ ಎಲ್ಲಾ ಸಮುದಾಯದವರಿಗೂ ಸೇನೆಗೆ ತರಬೇತಿ ಕೊಡಿ ಇಲ್ಲವಾದರೆ ಸಂವಿಧಾನದ 14 ಮತ್ತು 15 ನೇ ವಿಧಿಗೆ ದ್ರೋಹ ಮಾಡಿದಂತಾಗುತ್ತದೆಂದು
ಪ್ರಭಂಜನ್ ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಿ.ಷಡಾಕ್ಷರಪ್ಪ, ಜಿಲ್ಲಾ ಕಾರ್ಯದರ್ಶಿ ಎನ್.ಚನ್ನಕೇಶವ, ಗ್ರಾಮಾಂತರ ಕಾರ್ಯದರ್ಶಿ ಹೆಚ್.ಶ್ರೀನಿವಾಸ್, ನಗರ ಸಹ ಕಾರ್ಯದರ್ಶಿ ರಾಘವೇಂದ್ರ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.