ಕೃತಕ ಬುದ್ಧಿಮತ್ತೆಯ ಸವಾಲಿಗೆ ಮಾನವೀಯ ಕೌಶಲ್ಯಗಳೇ ಪರಿಹಾರ..!
ಚಿತ್ರದುರ್ಗ: ನಾವು ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಇದು ತಂತ್ರಜ್ಞಾನದ ಸವಾಲಿನ ಕಾಲ. ಪ್ರತಿಯೊಂದು ವಲಯದಲ್ಲೂ ಎಐ ಪ್ರಭಾವ ಹೆಚ್ಚಾಗುತ್ತಿದ್ದು, ಮಾನವೀಯ ಸಂವೇದನಾಶೀಲತೆ ಮತ್ತು ವಿವಿಧ ಕೌಶಲಗಳಿಂದ ಜನರು ದೂರವಾಗುತ್ತಿದ್ದಾರೆ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್. ತಾರಿಣಿ ಶುಭಾದಾಯಿನಿ ಆತಂಕ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸಾಂಸ್ಕøತಿಕ ಸಮಿತಿ ಹಾಗೂ ವಿವಿಧ ಸಮಿತಿಗಳ ಚಟವಟಿಕೆಗಳ ಉದ್ಘಾಟನಾ ಸಮಾರಂಭ'ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಂಸ್ಕøತಿಕವಾಗಿ ತಮ್ಮನ್ನು ಗಟ್ಟಿಗೊಳಿಸಿಕೊಳ್ಳಬೇಕು. ಪದವಿ ತರಗತಿಗಳಲ್ಲಿ ಆಯೋಜಿಸುವ ಪಠ್ಯೇತರ ಚಟವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಒಳ್ಳೆಯ ಆಲೋಚನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಸಿದ್ದಲಿಂಗಯ್ಯ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 'ಅಗ್ನಿರೆಕ್ಕೆಗಳು' ಕೃತಿ ಹಾಗೂ ಇಂಗ್ಲಿಷ್ನ ಶ್ರೇಷ್ಟ ಕವಿ ವಿಲಿಯಂ ಶೇಕ್ಸ್ಪಿಯರ್ ಅವರ ಸೃಜನಶೀಲ ಬರಹಗಳ ಓದು ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ಪ್ರಸ್ತುತ ಸಮಾಜದಲ್ಲಿ ‘ತಿಳಿದು ಬದುಕುವ' ಬದಲಿಗೆ ‘ಒಬ್ಬರನ್ನು ಒಬ್ಬರು ತಿಂದು ಬದುಕುವ' ಪ್ರವೃತ್ತಿ ಹೆಚ್ಚಾಗಿದೆ. ನಮ್ಮ ಮಾತು ಯಾರಿಗೂ ನೋವುಂಟು ಮಾಡದಂತೆ ಎಚ್ಚರ ವಹಿಸಬೇಕು. ಕಾಲೇಜಿನ ಸಾಂಸ್ಕøತಿಕ ಚಟವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಚಂಚಲ ಮನಸ್ಸನ್ನು ಶುದ್ಧಿಗೊಳಿಸಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು
ವೃತ್ತಿಪರ ತರಬೇತುದಾರ ಚಳ್ಳಕೆರೆ ಗಜೇಂದ್ರ ಮಾತನಾಡಿ, "ಆಧುನಿಕ ಜೀವನಶೈಲಿ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಇಂದಿನ ಯುವಜನತೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದೆ. ಪದವಿ ಹಂತದಲ್ಲಿಯೇ ವಿವಿಧ ಕೌಶಲಗಳನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಾಂಸ್ಕøತಿಕ ಸಮಿತಿ ಸಂಚಾಲಕ ಪ್ರೊ. ಬಿ. ಇ. ಜಗನ್ನಾಥ್ ಹಾಗೂ ಐಕ್ಯೂಎಸಿ ಸಂಚಾಲಕಿ ಪ್ರೊ. ಕೆ. ಲೀಲಾವತಿ ಮಾತನಾಡಿದರು.
ಸಮಾರಂಭದಲ್ಲಿ ವಿದ್ಯಾರ್ಥಿನಿ ಸಂಗೀತಾ ಅವರು ಪ್ರದರ್ಶಿಸಿದ ಭರತನಾಟ್ಯ ನೆರೆದವರ ಗಮನಸೆಳೆಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಹನುಮಂತಪ್ಪ, ರೆಡ್ಕ್ರಾಸ್ ಸಂಚಾಲಕ ಪ್ರೊ. ಪ್ರದೀಪ್ ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಎಸ್. ಬಿ. ಶಿವಪ್ರಸಾದ್, ಎನ್ಎಸ್ಎಸ್ ಅಧಿಕಾರಿಗಳಾದ ಪ್ರೊ.. ಬಸವರಾಜ, ಪ್ರೊ. ಪ್ರಸಾದ್, ರೋವರ್ಸ್-ರೇಂಜರ್ಸ್ ಸಂಚಾಲಕಿ ಪ್ರೊ. ಬಿ. ಜಯಮ್ಮ, ಮುರಳೀಧರ, ಕ್ರೀಡಾಧಿಕಾರಿ ಪ್ರೊ. ಪ್ರಸನ್ನ ಕುಮಾರ್, ಎನ್ಸಿಸಿ ಅಧಿಕಾರಿ ಪ್ರೊ. ಮಂಜುನಾಥ್, ಪ್ರಾಧ್ಯಾಪಕರಾದ ಪ್ರೊ. ಮೇಘನಾ ಹಾಗೂ ಪ್ರೊ. ಸೌಮ್ಯ ಉಪಸ್ಥಿತರಿದ್ದರು.