LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಕೇಂದ್ರ ಬರ ಅಧ್ಯಯನ ತಂಡ ಭೇಟಿ : ಭೀಕರ ಕ್ಷಾಮದ ದರ್ಶನ..!

ಕೇಂದ್ರ ಬರ ಅಧ್ಯಯನ ತಂಡ ಭೇಟಿ : ಭೀಕರ ಕ್ಷಾಮದ ದರ್ಶನ..!

 

ಚಿತ್ರದುರ್ಗ: ಜೂಜಾಟ ಆಡುವ ಮಾನ್ಸೂನ್‍ನೊಂದಿಗೆ ಈ ಬಾರಿ ಜಾಗತಿಕ ಎಲ್ ನಿನೋ ಪರಿಣಾಮ ಜೊತೆಗೂಡಿ, ರಾಜ್ಯಾದ್ಯಂತ ಬರಗಾಲ ತಂದೊಡ್ಡಿದೆ. ಮೊದಲ ಹಂತದಲ್ಲಿ ಬರ ಘೋಷಣೆಯಾದ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಹಳ್ಳಿಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ರೈತರ ಅಸಾಯಕತೆ ಹಾಗೂ ಭೀಕರ ಕ್ಷಾಮವನ್ನು ಕಣ್ಣಾರೆ ಕಂಡ ತಂಡ, ರೈತರ ದುಸ್ಥಿತಿಗೆ ಮಮ್ಮಲ ಮರುಗಿತು.

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದಲ್ಲಿ, ಉಪನಿರ್ದೇಶಕ ಚೇತ್ ರಾಮ್ ಮೀನಾ, ಕೇಂದ್ರದ ನೀತಿ ಆಯೋಗದ ಓಎಸ್‍ಡಿ ಕರ್ನಲ್ ಅಮರೇಂದ್ರ ಸಿಂಗ್, ಜಲಸಂಪನ್ಮೂಲ ಹಾಗೂ ನದಿ ಪುನಶ್ಚೇತನ ನಿದೇರ್ಶಕ ಡಾ.ಜೆ.ಹರ್ಷ ಅವರ ಅಧ್ಯಯನ ತಂಡ, ಮೊದಲಿಗೆ ಹಿರಿಯೂರು ತಾಲ್ಲೂಕು, ಧರ್ಮಪುರ ಹೋಬಳಿಯ ಸಕ್ಕರ ಗ್ರಾಮದ ತಿರುಮಲಪ್ಪ ನವರ ಜಮೀನಿಗೆ ಭೇಟಿ ನೀಡಿತು. 

ಸುಮಾರು 2.5 ಎಕೆರೆ ಜಮೀನಿನಲ್ಲಿ 1 ಕ್ವಿಂಟಾಲ್ ಶೇಂಗಾ ಬೀಜ ಬಿತ್ತಿರುವ ತಿರುಮಲಪ್ಪ, ಬಿತ್ತನೆ ಹಾಗೂ ರಸಗೊಬ್ಬರಕ್ಕಾಗಿ ಸುಮಾರು ರೂ.86,893 ಖರ್ಚು ಮಾಡಿದ್ದಾರೆ. ಮಳೆಯಿಲ್ಲದೆ ಕಾರಣ ಶೇಂಗಾ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಈಗಾಗಲೇ ರೂ. 1 ಲಕ್ಷ ನಷ್ಟ ಅನುಭವಿಸಿರುವ ರೈತ ತಿರುಮಲಪ್ಪ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕೇಂದ್ರ ಅಧ್ಯಯನ ತಂಡ ಎದುರು ಅಸಹಾಯಕತೆ ತೊಡಿಕೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ನೆರವಿಗೆ ಆಗಮಿಸುವಂತೆ ರೈತ ತಿರುಮಲಪ್ಪ ಮನವಿ ಮಾಡಿದರು.

ಪಕ್ಕದ ಮುಕುಂದಪ್ಪನವರ ಜಮೀನಿನಲ್ಲಿ ಅಂರ್ತಜಲ ಮಟ್ಟ ಕುಸಿದು, ನೀರಾವರಿ ಆಶ್ರಿತ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳು ಕುಂಠಿತವಾಗಿರುವುದನ್ನು ವೀಕ್ಷಿಸಿದ ತಂಡ, ಇನ್ನೊಂದು ಪಕ್ಕದಲ್ಲಿ ಈಗಾಗಲೇ ಓಣಗಿರುವ ಶೇಂಗಾ ಬೆಳೆಯನ್ನು ಕತ್ತರಿಸಿ ತಂದು ಮನೆಯ ಮುಂದೆ ಒಟ್ಟು ಮಾಡಿದ್ದ ರೈತ ನಾಗರಾಜ ಅವರನ್ನು ಭೇಟಿ ಮಾಡಿತು.

ಈ ವೇಳೆ ನಾಗರಾಜ ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದ್ದು, ಬೆಳೆ ಕೈಗೆ ಸಿಗುವ ಸಂಭವ ಕ್ಷೀಣಿಸಿದ್ದರಿಂದ, ಮನೆಯ ಜಾನುವಾರುಗಳಿಗೆ ಮೇವಿನ ಸುಲುವಾಗಿ ಬೆಳೆ ಕಟಾವು ಮಾಡಿರುವುದಾಗಿ ತಿಳಿಸಿದರು.

ಸುಮಾರು 10 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿ ನಷ್ಟ ಹೊಂದಿದ ರೈತ ತಿಪ್ಪಯ್ಯನವರ ಹೊಲಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತು.

 ‘ಹೊಲದಲ್ಲಿ ಕೊರೆಸಿರುವ ಬೋರ್‍ವಲ್‍ಗಳು ನೀರು ಸಿಗದೆ ವಿಫಲಗೊಂಡಿವೆ. ಈ ಬಾರಿ ಮೆಳೆ ನೆಚ್ಚಿಕೊಂಡು ರೂ.62,025 ಖರ್ಚು ಮಾಡಿ ತೊಗರಿ ಬಿತ್ತಿದ್ದೇನೆ. ಆದರೆ ಸೂಕ್ತ ಮಳೆ ಇರದ ಕಾರಣ ತೊಗರಿ ಗಿಡಗಳು ಟಿಸಿಲು ಒಡೆಯದೇ, ಬೆಳವಣಿಗೆ ಸಂಪೂರ್ಣ ಕುಂಠಿತವಾಗಿದೆ. ಒಂದು ಕಾಳು ತೊಗರಿಯೂ ಸಿಗುವುದಿಲ್ಲ. ಸುಮಾರು 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿಲಿದೆ. ಧರ್ಮಪುರ ಹೋಬಳಿಯಲ್ಲಿ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ ಎಲ್ಲ ರೈತರ ಪರಿಸ್ಥಿತಿ ಹೀಗೆ ಇದೇ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಕೃಷಿಕ ತಿಪ್ಪಯ್ಯ ಕೇಂದ್ರ ಅಧ್ಯಯನ ತಂಡದ ಮುಂದೆ ಬರಗಾಲದ ತೀವ್ರತೆಯನ್ನು ಅನಾವರಣ ಮಾಡಿದರು.

ಗ್ರಾಮದ ಇತರೆ ರೈತರ ಹೊಲಗಳಿಗೆ ಭೇಟಿ ನೀಡಿದ ತಂಡ ಮೆಕ್ಕೆಜೋಳ, ಪಾಪಾಯ, ತೆಂಗು ಬೆಳೆಗಳನ್ನು ವೀಕ್ಷಿಸಿತು. ಕಿಸಾನ್ ಕ್ರೆಡಿಟ್ ಕಾರ್ಡ್, ಬ್ಯಾಂಕುಗಳ ಸಹಕಾರ, ಹೈನುಗಾರಿಗೆ ಬಗ್ಗೆ ರೈತರಿಂದ ಮಾಹಿತಿ ಪಡೆಯಿತು.

 ಸ್ಥಳೀಯ ರೈತ ಮುಖಂಡ ಎಸ್.ಎನ್.ಗಿರಿ, ಗ್ರಾಮದ ರೈತರ ಬದುಕು ಕೃಷಿಯನ್ನೇ ಅವಲಂಬಿಸಿದೆ. ಬೋರ್‍ವೆಲ್ ಇದ್ದವರು ತೋಟ ಮಾಡಿದ್ದಾರೆ, ಆದರೆ ಮಳೆಯ ಕೊರತೆಯಿಂದಾಗಿ ಅಂರ್ತಜಲ ಮಟ್ಟವು ಕುಸಿಯುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕೆರೆಗಳನ್ನು ತುಂಬಿಸಿದರೆ, ರೈತರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ನಂತರ ಹೋಬಳಿಯ ಹೊಸಕೆರೆ ಗ್ರಾಮಕ್ಕೆ ತೆರಳಿದ ತಂಡವು, ಜಲಮೂಲಗಳ ಸಂರಕ್ಷಣೆ ಯೋಜನೆಯಡಿ (ವಿಬಿ-ಜಿ ರಾಮ್ ಜಿ ಯೋಜನೆ) ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು. ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕಲ್ಪಿಸಲಾಗಿರುವ ಗೃಹ ನಳ ಸಂಪರ್ಕದ ಕಾರ್ಯಕ್ಷಮತೆಯನ್ನು ಪರೀಕ್ಷಿಸಿತು. ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ, ಮಳೆಯಿಂದ ನಷ್ಟ ಉಂಟಾದ ತೊಗರಿ, ಹುರುಳಿ, ಮಿಡಿ ಸೌತೆ ಬೆಳಗಳನ್ನು ವೀಕ್ಷಿಸಿತು.

ರೈತರೊಂದಿಗೆ ಸಂವಾದ ಹಾಗೂ ಮನವಿ ಸ್ವೀಕಾರ:

ಕೇಂದ್ರ ಬರ ಅಧ್ಯಯನ ತಂಡವು ಪರುಶುರಾಮಪುರ ಹೋಬಳಿಯ ರೈತರ ಸಂಪರ್ಕ ಕೇಂದ್ರ ಆವರಣದಲ್ಲಿನ ರೈತ ಭವನದಲ್ಲಿ ಸ್ಥಳೀಯ ರೈತರೊಂದಿಗೆ ಸಂವಾದ ನಡಿಸಿ, ಮನವಿ ಸ್ವೀಕರಿಸಿತು.

ರೈತಮುಖಂಡ ಚಿಕ್ಕಣ್ಣ ಮಾತನಾಡಿ, ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬಿತ್ತನೆಗಾಗಿ ಪ್ರತಿ ಎಕರೆಗೆ ರೂ.30,000 ದಿಂದ ರೂ. 50,000 ವರೆಗೆ ವೆಚ್ಚ ಮಾಡಲಾಗಿದ್ದು, ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ, ಪ್ರತಿ ಹೆಕ್ಟೇರ್‍ಗೆ ರೂ.40,000 ಅಥವಾ ಪ್ರತಿ ಎಕರೆಗೆ ಕನಿಷ್ಠ ರೂ.20,000 ಪರಿಹಾರ ಧನ ನೀಡಬೇಕು ಎಂದು ರೈತ ನಾಯಕರು ಒತ್ತಾಯಿಸಿದರು.

2019 ರಿಂದಲೂ ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಯಡಿ ಭಾಗವಾದ ರೈತ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತಿಲ್ಲ. ಕೂಡಲೇ ತಾಂತ್ರಿಕ ಅಡಣೆಯನ್ನು ನಿವಾರಿಸಿ, ಭಾಗವಾದ ಕುಟುಂಬ ರೈತರಿಗೂ ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆ ಲಾಭ ದೊರೆಯುವಂತೆ ಮಾಡಬೇಕು. ಪ್ರಸ್ತುತ ಖಾಸಗಿ ಬ್ಯಾಂಕ್‍ಗಳ ಏಕಸ್ವಾಮ್ಯದಿಂದಾಗಿ ಹೋಬಳಿಯ ಸಾಮಾನ್ಯ ರೈತರಿಗೆ ವ್ಯವಹಾರ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಕೆನರಾ ಬ್ಯಾಂಕ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ರಾಷ್ಟ್ರೀಕೃತ ಬ್ಯಾಂಕ್‍ಗಳ ಶಾಖೆಗಳನ್ನು ತೆರೆಯಬೇಕು ಎಂದು ಮನವಿ ಮಾಡಿದರು. ರೈತರ ಸಮಸ್ಯೆಗಳಿಗೆ ತಂಡವು ಧನಾತ್ಮಕವಾಗಿ ಸ್ಪಂದಿಸಿ, ಉತ್ತಮ ತೀರ್ಮಾನದ ಭರವಸೆ ನೀಡಿತು.

ಶಾಶ್ವತ ಬರ ಪೀಡಿತ ಜಿಲ್ಲೆ ಘೋಷಣೆ ಒತ್ತಾಯ:

ದೊಡ್ಡೇರಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿದ ವೇಳೆ, ಕೇಂದ್ರ ಅಧ್ಯಯನ ತಂಡಕ್ಕೆ ರೈತರ ಮುಖಂಡ ಭೂತಯ್ಯನವರ ನಿಯೋಗ ಭೇಟಿ, ಜಿಲ್ಲೆಯನ್ನು ಶಾಶ್ವತ ಬರ ಪೀಡಿತ ಎಂದು ಘೋಷಣೆ ಮಾಡುವಂತೆ ಒತ್ತಾಯ ಮಾಡಿತು. ಕೂಡಲೇ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸುವಂತೆ ಮನವಿ ಮಾಡಿತು. ಬಳಿಕೆ ಕೇಂದ್ರ ತಂಡ ಕುರುಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿತು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುರು-ಶಿಷ್ಯ ಭಾಂದವ್ಯ ಸುಖಿ ಸಮಾಜದ ಹೆಗ್ಗುರುತು: ಎನ್.ಎಂ ರಮೇಶ್ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ ಸಿದ್ಧಿ ಆಗಬೇಕಾದರೆ ಇದೊಂದು ತಂತ್ರ ಮಾಡಿಗೃಹಲಕ್ಷ್ಮಿ ಹಣ ಪಡೆಯುವ ಮಹಿಳೆಯರು ಓದ ಬೇಕಾದ ಸುದ್ದಿ.!ಹೈಕೋರ್ಟ್‌ನಿಂದ ಮಹತ್ವದ ಆದೇಶ: ಸಾಲದ ಹಣ ಬಾಕಿ ಇದೆ ಎಂಬ ಕಾರಣಕ್ಕೆ ಗ್ರಾಹಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತಿಲ್ಲ..!ದಾವಣಗೆರೆ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ: ತೀವ್ರ ಮಳೆ  ಕೊರತೆ,  ಬೇಳೆ ಹಾನಿ ನಿಖರ ಅಂಶಗಳ ಮಾಹಿತಿ.!ವಿವಿಧ ಹೋಟೆಲ್, ಜ್ಯೂಸ್ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ..!ಕೇಂದ್ರ ಬರ ಅಧ್ಯಯನ ತಂಡ ಭೇಟಿ : ಭೀಕರ ಕ್ಷಾಮದ ದರ್ಶನ..!ವಚನ: -ಷಣ್ಮುಖಸ್ವಾಮಿದಿನದ ಮಂಡಕ್ಕಿ ಒಗ್ಗಣೆ ಮಿರ್ಚಿ 04-10-2026ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ.!