ಚಿತ್ರದುರ್ಗ: ಸರಸ್ವತಿ ಕಾನೂನು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ನ್ಯಾಯೋತ್ಸವ’ ಕಾನೂನು ಹಬ್ಬದ ಉದ್ಗಾಟನಾ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ ಅಭಿಜಿತ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ತಮ್ಮ ಜೀವನದ ಹಾಗೂ ಚಲನಚಿತ್ರ ಪಯಣದ ಅನುಭವಗಳನ್ನು ಹಂಚಿಕೊಂಡರು.
ಚಿತ್ರದುರ್ಗದವರೇ ಆದ ನಟ ಅಭಿಜಿತ್ ರಾವ್ ಅವರು ಚಳ್ಳಕೆರೆಯಲ್ಲಿ ಕಳೆದ ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡರು. ಚಿತ್ರದುರ್ಗದ ಪ್ರತಿಯೊಂದು ರಸ್ತೆಯೂ ತಮಗೆ ಪರಿಚಿತವಾಗಿದ್ದು, ಈ ಊರಿನೊಂದಿಗಿನ ತಮ್ಮ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡರು. ತಮ್ಮ ನಿಜಜೀವನದ ಕೆಲವು ಘಟನೆಗಳು ತಾವು ಅಭಿನಯಿಸಿದ ರಾಮಾಚಾರಿ’ ಪಾತ್ರವನ್ನು ಹೋಲುತ್ತವೆ ಎಂದು ತಿಳಿಸಿದರು.
ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ ಅವರೊಂದಿಗಿನ ಒಡನಾಟ ಹಾಗೂ ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಸ್ಮರಿಸಿಕೊಂಡ ಅವರು, ತಮ್ಮ ಪ್ರಸಿದ್ಧ ಚಲನಚಿತ್ರದ ಸಂಭಾಷಣೆ ಹಾಗೂ ಹಾಡುಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿದರು. ತಮ್ಮ ಮಾತಿನ ಕೊನೆಯಲ್ಲಿ ಭವಿಷ್ಯದ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ನಟ ಅಭಿಜಿತ್ ರಾವ್ ಅವರ ಪತ್ನಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಹಾಗೂ ವಕೀಲರು ಹಣಕ್ಕಾಗಿ ಕೆಲಸ ಮಾಡುವುದಕ್ಕಿಂತ ನ್ಯಾಯಕ್ಕಾಗಿ ಕೆಲಸ ಮಾಡಬೇಕು. ನ್ಯಾಯವನ್ನು ಎತ್ತಿಹಿಡಿಯುವ ಮೂಲಕ ಸಮಾಜದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ಸುಧಾದೇವಿ ಮಾತನಾಡಿ, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯ. ಜೀವನದಲ್ಲಿ ಮುಂದೆ ಸಾಗಲು ಸ್ಪಷ್ಟ ಗುರಿ ಇರಬೇಕು, ಆ ಗುರಿ ತಲುಪಲು ಗುರುಗಳ ಮಾರ್ಗದರ್ಶನವೂ ಇರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿರುವ ಕಲೆ, ಪ್ರತಿಭೆ ಹಾಗೂ ಕೌಶಲ್ಯಗಳನ್ನು ಬೆಳೆಸಲು ನಮ್ಮ ಕಾಲೇಜು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು. ವಿದ್ಯಾರ್ಥಿಗಳು ಉತ್ಸವದ ಅವಕಾಶಗಳನ್ನು ತಪ್ಪಿಸಿಕೊಳ್ಳದೆ ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇಂತಹ ಉತ್ಸವಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವುದರ ಜೊತೆಗೆ ವಾಣಿಜ್ಯ ಜ್ಞಾನ ವೃದ್ಧಿಗೂ ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಫಾತ್ಯರಾಜನ್ ವಹಿಸಿದ್ದರು. ಸರಸ್ವತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಟಿ.ಎಚ್. ಬಸವರಾಜ್ ಹಾಗೂ ಕಾರ್ಯದರ್ಶಿ ಶ್ರೀಮತಿ ಡಿ.ಕೆ. ಶೀಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂರ್ಣ ಚಂದ್ರ ತೇಜಸ್ವಿ ಪ್ರಾರ್ಥಿಸಿದರು. ವಿದ್ಯಾರ್ಥಿ ಕಾನೂನು ವೇದಿಕೆಯ ಗೌರವ ಅಧ್ಯಕ್ಷ ಹಾಗೂ ಸಹ ಪ್ರಾಧ್ಯಾಪಕ ಡಾ. ಕೆ.ಎಸ್. ಕರಿಯಣ್ಣ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ಐಕ್ಯೂಎಸಿ ಸಂಯೋಜಕ ಡಾ. ಎನ್.ಡಿ. ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾನೂನು ವೇದಿಕೆಯ ಅಧ್ಯಕ್ಷ ವಿಶ್ವಸಾಗರ. ಜಿ.ಪಿ., ಹಾಗೂ ವಿದ್ಯಾರ್ಥಿ ಕಾನೂನು ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿನುತಾ., ಎಚ್.ಜಿ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಕಾನೂನು ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಗಿರೀಶ್ ವಂದಿಸಿದರೆ, ಮಂಜುನಾಥ್ ನಿರೂಪಿಸಿದರು.