ಪಶ್ಚಿಮ ಬಂಗಾಳ :ಜನರಿಗೆ ನಿಮ್ಮ ರಾಜಕೀಯ ನಾಟಕ ನೋಡಿ ಸಾಕಾಗಿದೆ: ಅಮಿತ್ ಶಾ - BC Suddi
ಪಶ್ಚಿಮ ಬಂಗಾಳ :ಜನರಿಗೆ ನಿಮ್ಮ ರಾಜಕೀಯ ನಾಟಕ ನೋಡಿ ಸಾಕಾಗಿದೆ: ಅಮಿತ್ ಶಾ

ಪಶ್ಚಿಮ ಬಂಗಾಳ :ಜನರಿಗೆ ನಿಮ್ಮ ರಾಜಕೀಯ ನಾಟಕ ನೋಡಿ ಸಾಕಾಗಿದೆ: ಅಮಿತ್ ಶಾ

ರಾಣಿಬಂಧ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ರಾಣಿಬಂಧ್‌ನಲ್ಲಿ, ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅವರು ಸಭೆಗೆ ಆಗಮಿಸುವುದು ತಡವಾದ ಹಿನ್ನೆಲೆ ಜನತೆಯಲ್ಲಿ ಹೆಲಿಕಾಪ್ಟರ್‌ನ ತಾಂತ್ರಿಕ ದೋಷದಿಂದ ತಡವಾಯಿತು ಎಂದು ಹೇಳಿದ ಅವರು, ”ಅಷ್ಟಕ್ಕೂ ಹೆಲಿಕಾಪ್ಟರ್ ದೋಷ ಕಂಡು ಬಂದರೆ ಅದನ್ನೂ ಪಿತೂರಿ ಎನ್ನಲಾಗುತ್ತದೆಯೇ?” ಎಂದು ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಗಾಯಗೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಟಾಂಗ್ ನೀಡಿದ್ದಾರೆ.

”ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಾಯಗೊಂಡಿದ್ದಾರೆ. ಇದನ್ನು ಟಿಎಂಸಿ ಪಿತೂರಿ ಎಂದು ಹೇಳುತ್ತಿದೆ. ಆದರೆ ಚುನಾವಣಾ ಆಯೋಗ ಅಪಘಾತ ಎಂದು ಹೇಳುತ್ತಿದೆ. ನನಗೂ ದೀದಿ ಆರೋಗ್ಯದ ಬಗ್ಗೆ ಚಿಂತೆ” ಎಂದು ಹೇಳಿದ್ದು, ”ಆದರೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆಗೀಡಾದ 130ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ತಾಯಂದಿರ ಆ ನೋವು ನನಗೆ ಇದಕ್ಕಿಂತ ಅಧಿಕ” ಎಂದು ತಿರುಗೇಟು ನೀಡಿದರು.’ಜನರಿಗೆ ನಿಮ್ಮ ರಾಜಕೀಯ ನಾಟಕ ನೋಡಿ ಸಾಕಾಗಿದೆ. ಈ ಹಿನ್ನೆಲೆ ಈ ಬಾರಿ ಅಭಿವೃದ್ದಿಗಾಗಿ ಬಿಜೆಪಿಗೆ ಮತ ನೀಡುತ್ತಾರೆ” ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು.

ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ಗಾಯಗೊಂಡಿದ್ದ ದೀದಿ, ‘ಪ್ರಚಾರದ ವೇಳೆ ಯಾರೋ ನನ್ನನ್ನು ತಳ್ಳಿದ್ದಾರೆ’ ಎಂದು ಆರೋಪಿಸಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆದರೆ ಇದು ಕೇವಲ ರಾಜಕೀಯ ಬೂಟಾಟಿಕೆ ಎಂದು ವಿಪಕ್ಷ ನಾಯಕರು ದೂರಿದ್ದರು. ಹಾಗೆಯೇ ಪ್ರತ್ಯಕ್ಷದರ್ಶಿಗಳು ಬ್ಯಾನರ್ಜಿಯವರು ಬಾಗಿಲು ತೆರೆದ ಚಲಿಸುತ್ತಿರುವ ಕಾರಿನಲ್ಲಿ ಮತಯಾಚನೆ ಮಾಡುತ್ತಾ ತೆರಳುತ್ತಿದ್ದ ಸಂದರ್ಭ ಕಾರಿನ ಬಾಗಿಲು ಕಂಬಕ್ಕೆ ಢಿಕ್ಕಿಯಾಗಿ ಹಠಾತ್ ಮುಚ್ಚಿದೆ ಇದರಿಂದಾಗಿ ಸಿಎಂಗೆ ಗಾಯವಾಗಿದೆ ಎಂದು ಹೇಳಿದ್ದರು.

ಈ ಬೆನ್ನಲ್ಲೇ ಚುನಾವಣಾ ಆಯೋಗವು ಮಮತಾ ಮೇಲೆ ದಾಳಿಯಾಗಿಲ್ಲ, ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಗಾಯವಾಗಿದೆ ಎಂದು ಹೇಳಿತ್ತು. ತಾನು ಬಂದ ಹೆಲಿಕಾಪ್ಟರ್‌ನಲ್ಲಿ ಕಾಣಿಸಿದ ತಾಂತ್ರಿಕ ದೋಷವನ್ನು ಈ ಘಟನೆಗೆ ತಾಳೆ ಮಾಡಿ ಅಮಿತ್ ಶಾ ಅವರು ದೀದಿಯ ಕಾಲೆಳೆದಿದ್ದಾರೆ.

 

 

 

error: Content is protected !!