3 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ: ನಾಲ್ಕನೇ ಆಸ್ಪತ್ರೆಯ ಮುಂದೆಯೇ ಮೃತಪಟ್ಟ ಮಹಿಳೆ - BC Suddi
3 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ: ನಾಲ್ಕನೇ ಆಸ್ಪತ್ರೆಯ ಮುಂದೆಯೇ ಮೃತಪಟ್ಟ ಮಹಿಳೆ

3 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ: ನಾಲ್ಕನೇ ಆಸ್ಪತ್ರೆಯ ಮುಂದೆಯೇ ಮೃತಪಟ್ಟ ಮಹಿಳೆ

ಅಹ್ಮದಾಬಾದ್:‌ 33ರ ಹರೆಯದ ದೀಪಕ್‌ ಪಸತ್‌ ಎಂಬ ಯುವಕ ಅಹ್ಮದಾಬಾದ್‌ ನ ಅಸ್ವಾರ ಆಸ್ಪತ್ರೆಯ ಮುಂದೆ ವೀಲ್‌ ಚೇರ್‌ ನಲ್ಲಿ ತನ್ನ ಪತ್ನಿಯ ಮೃತದೇಹದೊಂದಿಗೆ ನಿಂತಿರುವ ಚಿತ್ರ ಎಂಥವರನ್ನೂ ಮನ ಕರಗಿಸುವಂತಿದೆ. ಆಸ್ಪತ್ರೆಗೆ ತಲುಪುತ್ತಿದ್ದಂತೆಯೇ ದೀಪಕ್‌ ಪತ್ನಿ ಊರ್ಮಿಳಾ ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಮೃತಪಟ್ಟಿದ್ದರು.

ಉತ್ತರಪ್ರದೇಶ ನಿವಾಸಿಯಾಗಿರುವ ದೀಪಕ್‌ “ನನ್ನ ಪತ್ನಿಗೆ ಜ್ವರ ಪ್ರಾರಂಭವಾಗಿತ್ತು. ಆದರೆ ಅದು ಗುಣಮುಖವಾದಂತೆ ಕಂಡ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯತೆ ಕಂಡು ಬಂದಿರಲಿಲ್ಲ. ಆದರೆ ಬುಧವಾರ ಮತ್ತೆ ಆಕೆಗೆ ಜ್ವರ ಕಾಣಿಸಿಕೊಂಡಿದ್ದು, ಉಲ್ಬಣಗೊಂಡಿತ್ತು. ನಾನು ಆಕೆಯನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋದಾಗ ಆಕ್ಸಿಜನ್‌ ಲೆವೆಲ್‌ ೫೦% ಆಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ತಿಳಿಸಿದರು.”

“108 ಆಂಬುಲೆನ್ಸ್‌ ಬರಲು ತಡವಾಗಬಹುದೆಂದು ನಾನು ಆಟೋ ರಿಕ್ಷಾದ ಮೂಲಕ ಆಕೆಯನ್ನು ಸಾಗಿಸಿದೆ. ಎಲ್ಲಾ ಆಸ್ಪತ್ರೆಗಳೂ ಇಲ್ಲಿ ಐಸಿಯು ಫುಲ್‌ ಆಗಿದೆ ಎಂದು ಹೇಳುತ್ತಿದ್ದರು. ಕೊನೆಗೆ ನಾನು ಸಿವಿಲ್‌ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದೆ. ಅಲ್ಲಿ ದೊಡ್ಡ ಸರತಿ ಸಾಲಿತ್ತು. ಆಂಬುಲೆನ್ಸ್‌ ಗಳೊಂದಿಗೆ ರೋಗಿಗಳು ಹೊರಗಡೆ ಕಾಯುತ್ತಿದ್ದರು. ಒಬ್ಬರು ಡಾಕ್ಟರ್‌ ಬಂದು ನನ್ನ ಪತ್ನಿಯನ್ನು ಪರೀಕ್ಷಿಸಿದ ಬಳಿಕ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿದರು. ನನ್ನಿಂದ ಆಕೆಯನ್ನು ಉಳಿಸಲಾಗಲಿಲ್ಲ” ಎಂದು ದೀಪಕ್‌ ಹೇಳುತ್ತಾರೆ.

ಹಾಸ್ಪಿಟಲ್‌ ಬಳಿಯಿದ್ದ ಕೆಲವು ಜನರು ಬಳಿಕ ರಿಕ್ಷಾವೊಂದರ ಮೂಲಕ ಪತ್ನಿಯ ಮೃತದೇಹವನ್ನು ಊರಿಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.