ಮುಷ್ಕರ ನಿರತರಿಗೆ ವರ್ಗಾವಣೆ ಶಿಕ್ಷೆ: ಬೇರೆಯೇ ಕಾರಣ ಕೊಟ್ಟ ಸಂಸ್ಥೆ - BC Suddi
ಮುಷ್ಕರ ನಿರತರಿಗೆ ವರ್ಗಾವಣೆ ಶಿಕ್ಷೆ: ಬೇರೆಯೇ ಕಾರಣ ಕೊಟ್ಟ ಸಂಸ್ಥೆ

ಮುಷ್ಕರ ನಿರತರಿಗೆ ವರ್ಗಾವಣೆ ಶಿಕ್ಷೆ: ಬೇರೆಯೇ ಕಾರಣ ಕೊಟ್ಟ ಸಂಸ್ಥೆ

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಎಲ್ಲ ಸಾರಿಗೆ ನಿಗಮಗಳ ನೌಕರರ ನಡುವೆ ನಾ ಕೊಡೆ ನೀ ಬಿಡೆ ಹೋರಾಟ ಮುಂದುವರೆದಿದೆ. ಈ ಹಗ್ಗ ಜಗ್ಗಾಟದಲ್ಲಿ ನಿತ್ಯ ಸಂಚಾರಕ್ಕೆ ಬಸ್ ಮೇಲೆಯೇ ಅವಲಂಬಿರತಾದ ಜನಸಾಮಾನ್ಯರ ಮೇಲೆ ಇದರ ನೇರ ಹೊರೆ ಬಿದ್ದಿದೆ. ಸತತ ನಾಲ್ಕನೇ ದಿನವೂ ಸಾರಿಗೆ ಮುಷ್ಕರ ಮುಂದುವರೆದಿದೆ. ಏತನ್ಮಧ್ಯೆ, ವಿವಿಧ ನಿಗಮಗಳ ಸಾರಿಗೆ ನೌಕರರನ್ನು ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ವರ್ಗಾವಣೆ ಮಾಡಲಾಗಿದೆ.

ಚಿತ್ರದುರ್ಗ ವಿಭಾಗದಲ್ಲಿ ಸಾರಿಗೆ ಸಂಸ್ಥೆಯ 10 ನೌಕರರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಅಂತೆಯೇ, ಮಂಡ್ಯ ವಿಭಾಗದ 14 ನೌಕರರು ಹಾಗೂ ಮೈಸೂರು ವಿಭಾಗದ 33 ನೌಕರರಿಗೂ ವರ್ಗಾವಣೆ ನೀಡಲಾಗಿದೆ. ಮೈಸೂರಿನಿಂದ ಮಂಗಳೂರು, ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದಾಗಿ ತಿಳಿದುಬಂದಿದೆ. ಮುಷ್ಕರದ ನಡೆಯುತ್ತಿರುವ ಸಂದರ್ಭದಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಆದರೆ ಇದಕ್ಕೆ ಆಡಳಿತಾತ್ಮಕ ಕಾರಣಗಳನ್ನು ಸಂಸ್ಥೆ ನೀಡಿದೆ. ಸಂಸ್ಥೆಯ ಈ ಏಕಾಏಕಿ ನಿರ್ಧಾರಕ್ಕೆ ವರ್ಗಾವಣೆಗೊಂಡ ನೌಕರರು ಆಕ್ರೋಶಿತರಾಗಿದ್ದಾರೆ.