ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದಿನಕ್ಕೊಂದು ತಿರುವು : ಸಿಡಿ ಗ್ಯಾಂಗ್ ಖಾತೆಯಲ್ಲಿ ಲಕ್ಷ, ಲಕ್ಷ ಹಣ ಪತ್ತೆ! - BC Suddi
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದಿನಕ್ಕೊಂದು ತಿರುವು : ಸಿಡಿ ಗ್ಯಾಂಗ್ ಖಾತೆಯಲ್ಲಿ ಲಕ್ಷ, ಲಕ್ಷ ಹಣ ಪತ್ತೆ!

ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದಿನಕ್ಕೊಂದು ತಿರುವು : ಸಿಡಿ ಗ್ಯಾಂಗ್ ಖಾತೆಯಲ್ಲಿ ಲಕ್ಷ, ಲಕ್ಷ ಹಣ ಪತ್ತೆ!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಶಂಕಿತ ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ಹಣ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಶಂಕಿತ ಪತ್ರಕರ್ತರ 8 ಬ್ಯಾಂಕ್ ಖಾತೆಯನ್ನು ಪರಿಶೀಲಿಸಿರುವ ಅಧಿಕಾರಿಗಳು ಒಂದು ತಿಂಗಳ ಒಳಗೆ ಲಕ್ಷಾಂತರ ಹಣ ಜಮೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಸಿಡಿಯಲ್ಲಿ ಪತ್ತೆಯಾಗಿರುವ ಮಹಿಳೆಯ ಅಪಹರಣವಾಗಿದೆ ಎಂದು ಆಕೆಯ ತಂದೆ ನೀಡಿದ ದೂರನ್ನು ಅಧಿಕಾರಿಗಳು ಆರ್’ಟಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು, ಆರ್’ಟಿ ನಗರ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಈ ಕುರಿತು ಹೆಚ್ಚು ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಇನ್ನೂ ಬಂಧನಕ್ಕೊಳಗಾಗದೆ ತಲೆ ಮರೆಸಿಕೊಂಡಿರುವ ಶಂಕಿತರ ಚಲನವಲನಗಳ ಮೇಲೆ ಕಣ್ಗಾವಲಿರಿಸಲಾಗಿದೆ. ಕೆಲವರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಆರ್’ಟಿ ನಗರದಲ್ಲಿರುವ ಮಹಿಳೆಯ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಸಿಮ್ ಕಾರ್ಡ್, ಕೆಲವು ವಸ್ತುಗಳು ಹಾಗೂ ನಗದನ್ನು ವಶಕ್ಕೆ ಪಡೆದಿದ್ದಾರೆಂದು ವರದಿಗಳು ತಿಳಿಸಿವೆ.

ಮಹಿಳೆ ಕಟ್ಟಡವೊಂದರಲ್ಲಿ ಬಾಡಿಗೆ ಮನೆಯಲ್ಲಿದ್ದು, ಕಟ್ಟದ ಮಾಲೀಕರು ಹಾಗೂ ನೆರೆಮನೆಯವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಸವೇಶ್ವರನಗರದಲ್ಲಿರುವ ಮತ್ತೊಬ್ಬ ಶಂಕಿತ ವ್ಯಕ್ತಿಯ ಮನೆಯಲ್ಲೂ ಎಸ್‌ಐಟಿ ಪರಿಶೀಲನೆ ನಡೆಸಿದ್ದು, ಈ ವೇಳೆ ರೂ.18 ಲಕ್ಷ ಮೌಲ್ಯ ಚಿನ್ನ ಖರೀದಿಸಿರುವ ರಶೀದಿ, ಲ್ಯಾಪ್ ಟಾಪ್, ಪೆನ್’ಡ್ರೈವ್ ವಶಕ್ಕೆ ಪಡೆದುಕೊಂದಿದ್ದಾರೆ. ಇದೀಗ ವಶಕ್ಕೆ ಪಡೆದಿರುವ ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ನ್ನು ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳುಹಿಸಿದ್ದಾರೆ.

error: Content is protected !!