ಸಂಸ್ಕೃತರತ್ನ ಶ್ರೀ ಕ. ರಾ ಲಕ್ಷ್ಮೀಕಾಂತಯ್ಯ ರ ಬಗ್ಗೆ ಪುಟ್ಟ ಮಾಹಿತಿ - BC Suddi
ಸಂಸ್ಕೃತರತ್ನ ಶ್ರೀ ಕ. ರಾ ಲಕ್ಷ್ಮೀಕಾಂತಯ್ಯ ರ ಬಗ್ಗೆ ಪುಟ್ಟ ಮಾಹಿತಿ

ಸಂಸ್ಕೃತರತ್ನ ಶ್ರೀ ಕ. ರಾ ಲಕ್ಷ್ಮೀಕಾಂತಯ್ಯ ರ ಬಗ್ಗೆ ಪುಟ್ಟ ಮಾಹಿತಿ

 

(ಜನನ : ೧೭-೦೨-೧೯೧೩, ಮರಣ : ೨೭-೦೭-೨೦೦೦).

ಮೂಲತಃ ತುಮಕೂರು ಜಿಲ್ಲೆಯವರು. ಆದರೆ ವಾಸಿಸುತ್ತಿದ್ದುದು ಚಿತ್ರದುರ್ಗ ಜಿಲ್ಲೆಯಲ್ಲಿ. ತಾಯಿ ಶ್ರೀಮತಿ ಸಂಜೀವಮ್ಮ, ತಂದೆ ಸಂಸ್ಕೃತ ಪಂಡಿತ ಹನುಮಾನ್ ವೆಂಕಟರಾಯರು. ತುಮಕೂರಿನಲ್ಲಿ ದಿನಾಂಕ: ೧೭-೧೨-೧೯೧೩ರಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡು ತಂದೆಯ ಪೋಷಣೆಯಲ್ಲಿ ಬೆಳೆದರು. ಇವರ ತಂದೆ ಮೇದಾವಿಗಳು, ಸಾಹಿತಿಗಳು. ಇವರಿಂದ ಕನ್ನಡ ಸಂಸ್ಕೃತ ಭಾಷೆಯನ್ನು ಕಲಿತು ೧೮ವರ್ಷಗಳ ಕಾಲ ತಮ್ಮ ತವರೂರಿನಲ್ಲಿ ಉಪನ್ಯಾಸಕರಾಗಿ ಆನಂತರ ಚಿತ್ರದುರ್ಗದಲ್ಲಿ ೧೭ವರ್ಷ ಸೇವೆ ಸಲ್ಲಿಸಿ ಇಲ್ಲಿಯೇ ನಿವೃತ್ತರಾದರು ಮತ್ತು ನೆಲೆಸಿದರು.

ಶ್ರೀಕಾಂತ್ ಎಂಬ ಕಾವ್ಯನಾಮದಿಂದ ಹಲವಾರು ಗ್ರಂಥಗಳನ್ನು ರಚಿಸಿ ಇವರೊಬ್ಬ ಹೆಸರಾಂತ ಸಾಹಿತಿಗಳ ಸಾಲಿನಲ್ಲಿ ಸೇರಿದರು. ಇವರು ರಚಿಸಿರುವ ನವೀನ ವ್ಯಾಕರಣ ಸಾರ ಮತ್ತು ಬಾಂಗ್ಲಾ ವಿಜಯ, ಅಭಿನವ ಕಾಳಿದಾಸರೆಂದು ಪ್ರಸಿದ್ಧರಾದ ಶ್ರೀ ಬಸಪ್ಪಶಾಸ್ತ್ರಿಗಳ ಹಳಗನ್ನಡ ಗ್ರಂಥವಾದ ದಮಯಂತೀ ಸ್ವಯಂವರ ಎಂಬ ಕೃತಿಯನ್ನು ಹೊಸಗನ್ನಡಕ್ಕೆ ಅನುವಾದಿಸಿದ್ದಾರೆ. ತಮ್ಮ ತಂದೆಯವರ ಜೀವನ ಹಾಗೂ ಸಾಹಿತ್ಯ ಚರಿತ್ರೆ ಕೃತಿಯನ್ನು ರಚಿಸಿದ್ದು ಈ ಎಲ್ಲಾ ಕೃತಿಗಳು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಂಗೀಕರಿಸಲ್ಪಟ್ಟು ಪ್ರಕಟಗೊಂಡಿವೆ.

ಹೊಸಗನ್ನಡಕ್ಕೆ ಹೆಚ್ಚಾಗಿ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಹಳಗನ್ನಡ ಹಾಗೂ ಸಂಸ್ಕೃತದಲ್ಲಿದ್ದ ಅನೇಕ ಕೃತಿಗಳನ್ನು ಹೊಸಗನ್ನಡಕ್ಕೆ ಅನುವಾದಿಸಿದ್ದಾರೆ. ಯಕ್ಷಗಾನದ ಶೈಲಿಯಲ್ಲಿ ಕೃತಿ ರಚಿಸಿದ್ದಾರೆ. ಅಲ್ಲದೆ ಕಾದಂಬರಿ, ಕವನ ಸಂಕಲನ ಇತ್ಯಾದಿ ಪ್ರಕಾರಗಳ ಕೃತಿಗಳನು ರಚಿಸಿದ್ದಾರೆ, ಇವರ ಸಾಹಿತ್ಯ ಕೃಷಿಗೆ ಸಂಘ ಸಂಸ್ಥೆಗಳಲ್ಲದೆ ಸರ್ಕಾರವೂ ಮನ್ನಣೆ ನೀಡಿ ಗೌರವಿಸಿದೆ.

ನವೀನ ವ್ಯಾಕರಣ, ಬಾಂಗ್ಲಾ ವಿಜಯ, ದಮಯಂತೀ ಸ್ವಯಂವರ, ಶ್ರೀ ಕನ್ಯಕಾಪರಮೇಶ್ವರಿ ಮಹಾತ್ಮೆ, ರೇಣುಕಾ ವಿಜಯ, ಬಿಚ್ಚುಗತ್ತಿ ಭರಮಪ್ಪನಾಯಕ, ಭಾಮಾ ಪರಿಣಯ, ಕೌರವ ಕಲಹ, ವಿರಹ ಸಲ್ಲಾಪ, ಚಂದ್ರಹಾಸ, ಮೂರುವರೆ ವಜ್ರ (ನಾರದಲೀಲೆ), ನಿಶಿಯ ಮುಂಬೆಳಕಿನಲ್ಲಿ, ಗಾಂಧೀ ಗೀತಾವಳಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

(ಚಿತ್ರದುರ್ಗ ಜಿಲ್ಲೆಯ ಅಸಾಮಾನ್ಯ ಸಾಧಕರಿವರು. ಇವರ ಪರಿಚಯ ಎಲ್ಲರಿಗಿರಲಿ ಎಂಬುದೇ ಈ ನಮ್ಮೂರು ನನ್ನ ಸಾಹಿತಿ ಲೇಖನ ಮಾಹಿತಿ. ಸಾಹಿತಿಗಳ ಬಗ್ಗೆ ಬರೆಯುತ್ತಿದ್ದರೆ ಮೈ ಪುಳಕಗೊಳ್ಳುತ್ತದೆ. ರೋಮಾಂಚನ ಗೊಳ್ಳುತ್ತದೆ. ಆಧುನಿಕ ಯುಗದ ವ್ಯವಸ್ಥೆಗಳು, ಮುದ್ರಣ ಸಲಕರಣೆಗಳು, ಅನುಕೂಲಗಳು ಅಂದಿನ ಕಾಲದಲ್ಲಿ ಇಲ್ಲವಾಗಿತ್ತು. ಆದರೂ ಈ ಎಲ್ಲಾ ಸಾಧಕರು ಶ್ರಮಪಟ್ಟು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಿಮ್ಮಲ್ಲೂ ಹೆಚ್ಚಿನ ಮಾಹಿತಿಗಳಿದ್ದರೆ ನಮಗೆ ಒದಗಿಸಿರಿ, ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನು ಸಾಧ್ಯವಾದಷ್ಟು ಶ್ರೀಮಂತಗೊಳಿಸೋಣ. ಧನ್ಯವಾದಗಳು).

 

ಸಂ.ಲೇಖನ:

ಕೆ.ಪಿ.ಎಮ್. ಗಣೇಶಯ್ಯ,

ರಂಗ ನಿರ್ದೇಶಕರು,

ಚಿತ್ರದುರ್ಗ -577501, , ದೂ: 9448664878.