ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಯೂ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ತಂತ್ರಸಾರ ಮತ್ತು ವೈಕಾನಸ ಆಗಮ ಸಂಪ್ರದಾಯದ ಪೂಜಾ ಪದ್ಧತಿಯಲ್ಲಿ ಬದಲಾವಣೆ ಮಾಡಬಾರದು ಎಂದು ಬೆಂಗಳೂರಿನ ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ಆಗ್ರಹಿಸಿದರೆ, ಮಾ. 11ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತ ರಕ್ಷಣಾ ಸಮಿತಿ ಹೆಸರಲ್ಲಿ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವರ ತಂದೆ ಶಿವನೆನ್ನುವ ನೆಲೆಯಲ್ಲಿ ಶಿವನಿಗೂ ಪೂಜೆಯ ಬೇಡಿಕೆ ಇಡಬೇಕು.ರಾಜ್ಯದ ಎಲ್ಲಾ ದೇವಳಗಳಲ್ಲಿ ಬಹಳ ಹಿಂದಿನಿಂದಲೂ ಪೂಜಾ ಪದ್ಧತಿಗಳು ನಿಶ್ಚಿತ ರೀತಿಯಲ್ಲಿ ,ಆಯಾ ಆಗಮ, ಸಂಪ್ರದಾಯದಂತೆ ನಡೆದು ಬರುತ್ತಿವೆ. ಹೀಗಾಗಿ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಹಿಂದಿನ ಪೂಜಾ ಪದ್ಧತಿಯನ್ನೇ ಮುಂದುವರಿಸಬೇಕು. ಯಾವುದೇ ರೀತಿಯ ಬದಲಾವಣೆಗೆ ಅವಕಾಶ ನೀಡಬಾರದೆಂದು ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮುಜರಾಯಿ ಇಲಾಖೆ ಆಯುಕ್ತರಿಗೆ ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಲಾಗುವುದಾಗಿ ತಿಳಿಸಿದ್ದಾರೆ.

ಆದರೆ ಇತ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತ ರಕ್ಷಣಾ ಸಮಿತಿಯು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿವಪಾರ್ವತಿಯ ಪುತ್ರ ಸ್ಕಂದ ಅಥವಾ ಸುಬ್ರಹ್ಮಣ್ಯ ದೇವರನ್ನು ಪ್ರಧಾನ ದೇವರಾಗಿ ಮತ್ತು ಶ್ರೀ ಉಮಾಮಹೇಶ್ವರ, ಶ್ರೀ ಕುಕ್ಕೆ ಲಿಂಗ,ಶ್ರೀ ಕಾಲಬೈರೇಶ್ವರ ದೇವರನ್ನು ಪರಿವಾರ ದೇವರುಗಳಾಗಿ ಹೊಂದಿರುವುದರಿಂದ ಸದರಿ ದೇವಸ್ಥಾನವು ಶಿವಾಂಶ ಅಥವಾ ಶೈವ ದೇವಸ್ಥಾನವಾಗಿರುವುದರಿಂದ ಶಿವರಾತ್ರಿ ದಿವಸ ಶಿವ ದೇವರ ಪ್ರಿಯವಾದ ರೀತಿಯಲ್ಲೇ ಮಹಾಶಿವರಾತ್ರಿ ದಿವಸವನ್ನುಶಾಸ್ತ್ರಬದ್ದವಾಗಿಯೇ ಆಚರಣೆ ಮಾಡಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳಿಗೆ ಮನವಿ ಮಾಡಿದೆ.
ಒಟ್ಟಿನಲ್ಲಿ ಎರಡು ಗುಂಪುಗಳ ಹೇಳಿಕೆಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.