ಹುಮ್ನಾಬಾದ್ : ಸಾರಿಗೆ ಸಂಸ್ಥೆಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸಂದರ್ಭದಲ್ಲಿ ಸ್ವಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವ ಇಚ್ಛೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಭದ್ರತೆ ಒದಗಿಸುವುದು ನಮ್ಮ ಕೆಲಸವಾಗಿದ್ದು, ಅದನ್ನು ಮಾಡುತ್ತೇವೆ. ರಾಜ್ಯದಲ್ಲಿರುವ ನಾಲ್ಕೂ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಸಂಬಂಧ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಬಸ್ಗಳಿಲ್ಲದೆ ಜನಸಾಮಾನ್ಯರಿಗೆ ಪ್ರಯಾಣಿಸಲು ಆಗುತ್ತಿರುವ ತೊಂದರೆಯನ್ನು ಗಮನಿಸುತ್ತಿದ್ದೇವೆ. ಜನರು ಪ್ರಯಾಣಿಸಲು ಎಷ್ಟು ಪರದಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಷ್ಕರದಿಂದಾಗಿ ಸಾರಿಗೆ ಸಂಸ್ಥೆಗಳಿಗೂ ನಷ್ಟವಾಗುತ್ತಿದೆ. ಸಾರಿಗೆ ಸಂಸ್ಥೆಗಳನ್ನು ಬಲಗೊಳಿಸಿ ಶಾಶ್ವತವಾಗಿ ನೌಕರರ ಹಿತ ಕಾಪಾಡುವುದು ಎಷ್ಟು ಕಷ್ಟ ಎಂಬುದರ ಅರಿವು ಎಲ್ಲರಿಗೂ ಇದೆ.
ಸಾರಿಗೆ ಸಂಸ್ಥೆಗಳು ಉಳಿಯಬೇಕು, ನೌಕರರಿಗೂ ಸಂಬಳ ಸಿಗಬೇಕು. ನೌಕರರು ಕೆಲಸ ಮಾಡಿದಾಗ ಸಂಬಳ ಸಿಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮುಷ್ಕರ ನಿರತ ಸಿಬ್ಬಂದಿ ಮಾನವೀಯತೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೆಲಸಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.