ಬೆಂಗಳೂರು: ಬಹು ನಿರೀಕ್ಷಿತ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಆರ್ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಬೆನ್ನಲ್ಲೇ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್ಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರ್ಸಿಬಿ, “ಐಪಿಎಲ್ನಲ್ಲಿ ಭಾಗವಹಿಸಲು ಡೇನಿಯಲ್ ಸ್ಯಾಮ್ಸ್ ಏಪ್ರಿಲ್ 3ರಂದು ಚೆನ್ನೈನ ಹೋಟೆಲ್ಗೆ ಆಗಮಿಸಿದ್ದರು. ಈ ವೇಳೆ ಮಾಡಿದ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಆದರೆ ಏಪ್ರಿಲ್ 7ರಂದು ನಡೆದ ಕೊರೊನಾ ಪರೀಕ್ಷೆಯಲ್ಲಿ ಅವರ ವರದಿ ಪಾಸಿಟಿವ್ ಬಂದಿದೆ. ಆದರೆ ಅವರಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಅವರನ್ನು ಐಸೋಲೇಟ್ ಮಾಡಲಾಗಿದೆ. ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದು, ಬಿಸಿಸಿಐ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದೆ.
ಕಳೆದ ಭಾನುವಾರವಷ್ಟೇ ದೇವ್ದತ್ ಪಡಿಕ್ಕಲ್ ಅವರಿಗೆ ಸೋಂಕು ತಗುಲಿದ್ದು, ಕ್ವಾರಂಟೀನ್ಗೆ ಒಳಗಾಗಿದ್ದರು. ಸದ್ಯ ಅವರು ಕೊರೊನಾದಿಂದ ಚೇತರಿಸಿಕೊಂಡಿದ್ದು, ತಂಡದೊಂದಿಗೆ ಸೇರಿಕೊಂಡಿದ್ದಾರೆ.