ಹೊಸದಿಲ್ಲಿ: ಭಾರತದಲ್ಲಿ ಮೇ- ಜೂನ್ ತಿಂಗಳಿನಲ್ಲಿ ಮಳೆ ಆರಂಭಗೊಳ್ಳಲಿದೆ. ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸಿ 100 ದಿನಗಳ ಮಳೆ ಕೊಯ್ಲು ಅಭಿಯಾನ ಆರಂಭಿಸೋಣವೇ? ಈ ಪರಿಕಲ್ಪನೆಯನ್ನು ಆಧರಿಸಿ ಜಲಶಕ್ತಿ ಸಚಿವಾಲಯ ಶೀಘ್ರದಲ್ಲೇ “ಕ್ಯಾಚ್ ದಿ ರೈನ್’ ಅಭಿಯಾನ ಆರಂಭಿಸಲಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ, ಫೆ.28ರಂದು “ಮನ್ ಕಿ ಬಾತ್’ ರೇಡಿಯೊ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾವಿಸಿ, ಮಳೆಗಾಲ ಆರಂಭಕ್ಕೆ ಮುನ್ನ ಇಂಥದೊಂದು ಸಂಕಲ್ಪ ಮಾಡುವ ಬಗ್ಗೆ ಕರೆ ನೀಡಿದರು.

ಹಾಗೂ ಮಳೆ ನೀರು ಕೊಯ್ಲು ನಡೆಸುವ ಮೂಲಕ ಜಲ ಸಂಪನ್ಮೂಲ ಸದ್ಬಳಕೆಗಾಗಿ ಕೇಂದ್ರ ಸರಕಾರ ಹೊಸ ಅಭಿಯಾನವನ್ನು ಮಾಡುವ ಎಂದರು. ಮಧ್ಯಪ್ರದೇಶದ ಛತರ್‌ಪುರ್ ಜಿಲ್ಲೆಯ ಅಗ್ರೌತಾ ಎಂಬ ಹಳ್ಳಿಯಲ್ಲಿ ಬತ್ತಿದ ಕೆರೆಯನ್ನು ಪುನರುಜ್ಜೀವನಗೊಳಿಸಿದ ಬಬಿತಾ ರಾಜಪುತ್ ಅವರನ್ನು ಮೋದಿ ಸ್ಮರಿಸಿದರು ಮತ್ತು ಅವರಂತಹ ನಾರಿಯರು ದೇಶಕ್ಕೆ ಸ್ಫೂರ್ತಿ ಎಂದರು.“ಮಾಘ ಮಾಸದಲ್ಲಿ ನದಿ ಸ್ನಾನ ಪವಿತ್ರ ಎಂದು ನಮ್ಮ ಸಂಸ್ಕೃತಿ ಎತ್ತಿಹಿಡಿಯುತ್ತದೆ. ಶತಮಾನಗಳಿಂದ ಮನುಕುಲಕ್ಕೆ ನೀರು ನಿರ್ಣಾಯಕವಾಗಿದೆ. ನೀರು ನಮ್ಮ ಜೀವನಕ್ಕೆ ಆವಶ್ಯಕವಾದಂತೆ ದೇಶದ ಅಭಿವೃದ್ಧಿಗೂ ಅತ್ಯವಶ್ಯ’ ಎಂದು ವಿವರಿಸಿದರು.

ಮತ್ತು ಸೂಕ್ಷ್ಮ ನೀರಾವರಿ ಬಳಸಿ ನುಗ್ಗೆ ಕೃಷಿಯಲ್ಲಿ ಸಾಧನೆಗೈದ ಗುಜರಾತ್‌ನ ಪಠಾಣ್ ಜಿಲ್ಲೆಯ ಕಾಮರಾಜ್ ಚೌಧರಿ ಅವರನ್ನು ಪ್ರಧಾನಿ ಭಾಷಣದಲ್ಲಿ ನೆನೆದರು. “ಲ್ಯಾಬ್ ಟು ಲ್ಯಾಂಡ್’ ಮಂತ್ರದೊಂದಿಗೆ ವಿಜ್ಞಾನವನ್ನು ಆ ಜಿಲ್ಲೆಯ ಜನ ಮುಂಚೂಣಿಗೆ ಒಯ್ಯುತ್ತಿದ್ದಾರೆ ಎಂದರು. ಸಾವಯವ ಕೃಷಿ ವಿಧಾನದಲ್ಲಿ 10 ವರ್ಷಗಳಿಂದ ಕಾಮರಾಜ್ ಬೆಳೆಯುತ್ತಿರುವ ನುಗ್ಗೆ ಫಸಲು ಪ. ಬಂಗಾಲ, ತ.ನಾಡು, ಒಡಿಶಾಕ್ಕೂ ರವಾನೆಯಾಗುತ್ತಿದೆ ಎಂದು ತಿಳಿಸಿದರು.