ಕುಂಭಮೇಳದಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ನೇಮಕ - BC Suddi
ಕುಂಭಮೇಳದಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ನೇಮಕ

ಕುಂಭಮೇಳದಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ನೇಮಕ

ಹರಿದ್ವಾರ: ಈ ವರ್ಷದ ಕುಂಭಮೇಳದಲ್ಲಿ ಸುಮಾರು 1,553 ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉತ್ತರಾಖಂಡ ಪೊಲೀಸರು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ನೇಮಿಸಿದ್ದಾರೆ. ಕುಂಭಮೇಳದಲ್ಲಿ ಹರಿದು ಬರುವ ಅಪಾರ ಭಕ್ತ ಸಮುದಾಯವನ್ನು ನಿಯಂತ್ರಿಸಲು ಹಾಗೂ ಕೊರೊನಾ ಮಾರ್ಗಸೂಚಿಯ ಬಗ್ಗೆ ಭಕ್ತರಿಗೆ ಪದೇ ಪದೇ ನೆನಪಿಸುವ ಕಾರ್ಯವನ್ನು ಈ ಸ್ವಯಂಸೇವಕರು ಮಾಡುತ್ತಿದ್ದಾರೆ. ಎಲ್ಲರಿಗೂ ಪೊಲೀಸರು ಗುರುತಿನ ಚೀಟಿ, ಕ್ಯಾಪ್ ಮತ್ತು ಜಾಕೆಟ್ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿಎಸ್‌ಪಿ ಬೀರೇಂದ್ರ ಪ್ರಸಾದ್ ದಬ್ರಾಲ್ ಅವರು, ”ಈ ಹಿಂದೆ ಕುಂಭದ ಸಮಯದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಸಹಾಯ ಮಾಡಿದ್ದರು. ಆದರೆ ಅವರಿಗೆ ಗುರುತಿನ ಚೀಟಿ ನೀಡಿರುವುದು ಇದೇ ಮೊದಲು. ಅವರು ಟ್ರಾಫಿಕ್‌ ಹಾಗೂ ಜನಸಂದಣಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸೇವಾ ದಳ ಸೇರಿದಂತೆ ಹಲವಾರು ಇತರ ಸಾಮಾಜಿಕ ಸಂಘಟನೆಗಳನ್ನು ಈ ವರ್ಷದ ಕುಂಭಕ್ಕೆ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಎಸ್‌ಎಸ್ ಉತ್ತರಾಖಂಡ ಪ್ರಾಂತ್ ಶಾರಿರಿಕ್ ಪ್ರಮುಖ್ ಸುನಿಲ್, ”ಕುಂಭಮೇಳದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ 18 ರಿಂದ 50 ವರ್ಷದೊಳಗಿನ ಸ್ವಯಂಸೇವಕರ ವಿವರಗಳನ್ನು ನೀಡುವಂತೆ ಎಲ್ಲಾ ಜಿಲ್ಲಾ ಆರ್‌ಎಸ್‌ಎಸ್ ಘಟಕಗಳಿಗೆ ಪತ್ರ ಬರೆಯಲಾಗಿತ್ತು. ಸ್ವಯಂ ಸೇವಕರಾಗಿ ಬಂದವರಿಗೆ ಎಲ್ಲಾ ಮಾರ್ಗದರ್ಶನ ನೀಡಲಾಗಿದೆ. ಅವರಿಗೆ ಯಾವುದೇ ಹಣ ನೀಡಲಾಗುವುದಿಲ್ಲ” ಎಂದು ಹೇಳಿದರು.