ಪಿಡಿಪಿ ಮುಖಂಡ ವಾಹೀದ್‌ ನಿಂದ ಉಗ್ರರಿಗೆ ಶಸ್ತ್ರಾಸ್ತ್ರ‌ ಹಾಗೂ ಹಣಕಾಸು ನೆರವು :  ಎನ್ಐಎ - BC Suddi
ಪಿಡಿಪಿ ಮುಖಂಡ ವಾಹೀದ್‌ ನಿಂದ ಉಗ್ರರಿಗೆ ಶಸ್ತ್ರಾಸ್ತ್ರ‌ ಹಾಗೂ ಹಣಕಾಸು ನೆರವು :  ಎನ್ಐಎ

ಪಿಡಿಪಿ ಮುಖಂಡ ವಾಹೀದ್‌ ನಿಂದ ಉಗ್ರರಿಗೆ ಶಸ್ತ್ರಾಸ್ತ್ರ‌ ಹಾಗೂ ಹಣಕಾಸು ನೆರವು :  ಎನ್ಐಎ

ಕಾಶ್ಮೀರ: ಜಮ್ಮು-ಕಾಶ್ಮೀರದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಪಿಡಿಪಿಯ ಯುವ ಮುಖಂಡ ವಾಹೀದ್‌-ಉರ್‌-ರೆಹಮಾನ್‌ ಪರ್ರಾ ಉಗ್ರರಿಗೆ ಆರ್ಥಿಕ ನೆರವು ಹಾಗೂ ಪಿಸ್ತೂಲ್‌-ಗನ್‌ಗಳನ್ನು ಪೂರೈಸುವ ಜಾಲವನ್ನು ನಡೆಸುತ್ತಿದ್ದು ” ದೊಡ್ಡ ಪಿತೂರಿಯ ಭಾಗ” ಎಂದು   ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಆರೋಪಿಸಿದೆ.

ಜಮ್ಮು ಕೋರ್ಟ್‌ಗೆ ಈ ಸಂಬಂಧ ಪೂರಕ ಆರೋಪಪಟ್ಟಿಯನ್ನು ಕೂಡ ಎನ್‌ಐಎ ಅಧಿಕಾರಿಗಳು ಸಲ್ಲಿಸಿದ್ದಾರೆ. ವಾಹೀದ್‌ 2010ರಿಂದಲೂ ಪಾಕಿಸ್ತಾನದಿಂದ ಗಡಿ ನುಸುಳುವ ಉಗ್ರರಿಗೆ ಅಗತ್ಯ ನೆರವು ನೀಡುತ್ತಿದ್ದಾನೆ. ತನ್ನ ಪರಿಚಯದ 20-25 ಯುವಕರ ತಂಡ ಕಟ್ಟಿಕೊಂಡು ಅವರ ಮೂಲಕ ಭದ್ರತಾ ಪಡೆಗಳ ಕಾರ್ಯಾಚರಣೆ ವೇಳೆ ಸೈನಿಕರ ಮೇಲೆ ಕಲ್ಲುತೂರಾಟ ನಡೆಸುತ್ತಾನೆ. ರಾಜಕೀಯವಾಗಿ ಪ್ರಭಾವಿ ಎಂದು ಗುರುತಿಸಿಕೊಳ್ಳಲು ವಾಹೀದ್‌ ಇಂಥ ಕೃತ್ಯಗಳ ನೇತೃತ್ವ ವಹಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯಿಂದ ರಾಜಕೀಯ ಮೈಲೇಜ್ ಪಡೆಯಲು ವಾಹೀದ್‌ ಇದನ್ನು ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೋಪಿಸಿದೆ. ಕೇಂದ್ರಡಳಿತ ಪ್ರದೇಶ ಎಂದು ಗುರುತಿಸುವ ಮುಂಚೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ 2010 ರಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಪಕ್ಷವು ಪ್ರತಿಪಕ್ಷವಾಗಿತ್ತು.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಉಗ್ರ ಸಂಘಟನೆ ‘ಹಿಜ್ಬುಲ್‌ ಮುಜಾಹಿದ್ದೀನ್‌’ ಮುಖಂಡರು ಕೂಡ ವಾಹೀದ್‌ನನ್ನು ಆಗಾಗ್ಗೆ ಸಂಪರ್ಕಿಸಿ, ನೆರವು ಪಡೆಯುತ್ತಿದ್ದರು ಎಂದು ಎನ್‌ಐಎ ಆರೋಪಿಸಿದೆ. ವಾಹೀದ್‌ ಅವರನ್ನು ಕಳೆದ ನವೆಂಬರ್‌ನಲ್ಲಿ ಬೇರೊಂದು ಪ್ರಕರಣದಲ್ಲಿ ಎನ್‌ಐಎ ಬಂಧಿಸಿತ್ತು. ಶ್ರೀನಗರದ ಎನ್‌ಐಎ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

error: Content is protected !!