ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಭಾರತ - BC Suddi
ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಭಾರತ

ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಭಾರತ

ಪುಣೆ: ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತವು 7 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 330 ರನ್‌ಗಳ ಗುರಿ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 9 ವಿಕೆಟ್‌ ಕಷ್ಟಕ್ಕೆ 322 ರನ್‌ ಗಳಿಸಲು ಶಕ್ತವಾಯಿತು.

ಭಾರತ ನೀಡಿದ್ದ 330 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡವು ಮೊದಲ ಓವರ್‌ನಲ್ಲೇ ಆಘಾತಕ್ಕೆ ತುತ್ತಾಯಿತು. ಆರಂಭಿಕ ಆಟಗಾರ ಜೇಸನ್ ರಾಯ್‌ (14 ರನ್) ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗಿ ಭುವನೇಶ್ವರ್ ಕುಮಾರ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಜಾನಿ ಬೇರ್‌ಸ್ಟೋವ್ (1 ರನ್) , ಬೆನ್‌ ಸ್ಟೋಕ್ಸ್ (35 ರನ್), ನಾಯಕ ಜೋಸ್ ಬಟ್ಲರ್ (15 ರನ್) ವಿಕೆಟ್‌ ಒಪ್ಪಿಸಿದರು. ಪರಿಣಾಮ ಇಂಗ್ಲೆಂಡ್‌ ತಂಡವು 95 ರನ್‌ ಗಳಿಸಿದ್ದಾಗ ಪ್ರಮುಖ ನಾಲ್ಕು ವಿಕೆಟ್‌ ಕಳೆದು ಸಂಕಷ್ಟಕ್ಕೆ ಸಿಲುಕಿತ್ತು.

ಡೇವಿಡ್‌ ಮಲಾನ್ ಹಾಗೂ ಲಿಯಮ್‌ ಲಿವಿಂಗ್‌ಸ್ಟೋನ್ ಜೋಡಿಯು ವಿಕೆಟ್‌ ಕಾಯ್ದುಕೊಂಡು ತಂಡದ ಮೊತ್ತವನ್ನು ಏರಿಸಿತು. ಇದರಿಂದಾಗಿ ಐದನೇ ವಿಕೆಟ್‌ಗೆ ಇಂಗ್ಲೆಂಡ್ 155 ರನ್‌ ಗಳಿಸಿತು. ಲಿಯಮ್‌ ಲಿವಿಂಗ್‌ಸ್ಟೋನ್ 36 ರನ್ ಗಳಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಡೇವಿಡ್‌ ಮಲಾನ್ (50 ರನ್), ಮೊಯಿನ್‌ ಅಲಿ (29 ರನ್) ಹಾಗೂ ಆದಿಲ್‌ ರಶೀದ್‌ 19 ರನ್ ಗಳಿಸಲು ಶಕ್ತರಾದರು.

ತಂಡದ ಗೆಲುವಿಗಾಗಿ ಸ್ಯಾಮ್‌ ಕರನ್‌ ಬಿಟ್ಟು ಬಿಡದೇ ಹೋರಾಡಿದರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದ ಅವರು 95 ರನ್ (83 ಎಸೆತ 9 ಬೌಂಡರಿ, 3 ಸಿಕ್ಸರ್) ಸಿಡಿಸಿದರು. ಆದರೆ ಸ್ಯಾಮ್ ಕರನ್ ಏಕಾಂಗಿ ಹೋರಾಟ ವ್ಯರ್ಥವಾಯಿತು.

ಭಾರತ ಪರ ಯುವ ಬೌಲರ್ ಶಾರ್ದೂಲ್ ಠಾಕೂರ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಅನುಭವಿ ವೇಗದ ಬೌಲರ್ ಭಬುನವೇಶ್ವರ್ ಕುಮಾರ್ 10 ಓವರ್ ಬೌಲಿಂಗ್‌ ಕೇವಲ 42 ರನ್‌ ನೀಡಿ ಮೂರು ವಿಕೆಟ್ ಪಡೆದರೆ, ಟಿ.ನಟರಾಜನ್ ಒಂದು ವಿಕೆಟ್ ಕಿತ್ತು ತಂಡದ ಗೆಲುವಿಗೆ ಆಸರೆಯಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತವು 48.2 ಓವರ್‌ಗಳಲ್ಲಿ 329 ರನ್‌ ಗಳಿಸಿ ಸರ್ವಪತನ ಕಂಡಿತ್ತು. ತಂಡದ ಪರ ರಿಷಬ್ ಪಂತ್ 78 ರನ್, ಶಿಖರ್ ಧವನ್ 67 ರನ್, ಹಾರ್ದಿಕ್ ಪಾಂಡ್ಯ 64 ರನ್, ರೋಹಿತ್ ಶರ್ಮಾ 37 ರನ್, ಶಾರ್ದೂಲ್ ಠಾಕೂರ್ 30 ರನ್ ದಾಖಲಿಸಿದರೆ, ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ತಲಾ 7 ರನ್ ಗಳಿಸಿ ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿದ್ದರು.

https://www.bcsuddi.com/socialhttps://www.bcsuddi.com/social

error: Content is protected !!