ಕುಂಭಮೇಳದಲ್ಲಿ ಮುಸ್ಲಿಂ ಮಹಾಯೋಗಿಯ ಭಗವದ್ಗೀತೆ ಪ್ರವಚನ - BC Suddi
ಕುಂಭಮೇಳದಲ್ಲಿ ಮುಸ್ಲಿಂ ಮಹಾಯೋಗಿಯ ಭಗವದ್ಗೀತೆ ಪ್ರವಚನ

ಕುಂಭಮೇಳದಲ್ಲಿ ಮುಸ್ಲಿಂ ಮಹಾಯೋಗಿಯ ಭಗವದ್ಗೀತೆ ಪ್ರವಚನ

ಹರಿದ್ವಾರ: ಅಪ್ಪಟ ವೈಷ್ಣವ ಅನುಯಾಯಿಯಂತೆ ಹಣೆಗೆ ‘ಯು’ ಆಕಾರದ ಗಂಧದ ತಿಲಕ ಹಚ್ಚಿ, ಸನ್ಯಾಸಿಗಳು ಧರಿಸುವ ತಿಳಿ ಬಣ್ಣದ ಕುರ್ತಾ ಧರಿಸಿ ಅಗ್ನಿಕುಂಡದ ಮುಂದೆ ಕುಳಿತ ಇವರು ಉಳಿದವರಂತೆಯೇ ಮಹಾ ಕುಂಭಮೇಳದ ಬೈರಾಗಿ ಕ್ಯಾಂಪ್‌ನಲ್ಲಿ ಕಾಣಸಿಗುತ್ತಾರೆ.

ಉಪನಿಷತ್ ಮತ್ತು ಭಗವದ್ಗೀತೆ ಪ್ರವಚನ ನೀಡುತ್ತಾರೆ. ಇದೆಲ್ಲದರ ಕೊನೆಯಲ್ಲಿ ತಿಳಿದ ಅಚ್ಚರಿಯ ವಿಚಾರ ಏನೆಂದರೆ ಇವರೊಬ್ಬ ಮುಸ್ಲಿಂ. ‘ಶ್ರೀ ಎಂ’ ಎಂದೇ ಕರೆಯಲ್ಪಡುವ ಮುಮ್ತಾಜ್ ಅಲಿ ಖಾನ್ ಕೇರಳದ ಅಪ್ಪಟ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದವರು.

ಕುಂಭಮೇಳದಲ್ಲಿ ಇವರು ಇವರದ್ದೇ ಆದ ಅಖಾಡ, ಯೋಗ ಧಾಮ, ಸಾಧು ಸೇವೆ ಮಾಡುವುದರೊಂದಿಗೆ ಭಜನೆಯನ್ನೂ ಮಾಡುತ್ತಾರೆ. ದೇವರು ಬೇರೆ ಬೇರೆ ನಾಮಗಳಿಂದ ಕರೆಯಲ್ಪಡುತ್ತಾನೆ ಅಷ್ಟೇ. ಅಲ್ಲಾಹ್, ಕ್ರಿಸ್ತ, ಕೃಷ್ಣ ಹೀಗೆ ಹಲವು ನಾಮ. ಈ ಭಿನ್ನ ಹೆಸರುಗಳ ಹೊರತಾಗಿ ದೇವರು ಒಬ್ಬನೇ. ಒಮ್ಮೆ ಈ ಜ್ಞಾನ ಪಡೆದರೆ ಎಲ್ಲರೂ ಹುಡುಕುವುದು ಇದೇ ಜ್ಞಾನ ಎಂಬುದು ಅರಿವಾಗುತ್ತದೆ ಎಂದು ನಸುನಗುತ್ತಾರೆ ಶ್ರೀ ಎಂ.

ಇವರ ಲೋಕಕಲ್ಯಾಣ ಮತ್ತು ಆಧ್ಯಾತ್ಮಿಕ ಸೇವಾ ಕೈಂಕರ್ಯಕ್ಕಾಗಿ ಕಳೆದ ವರ್ಷ ಪದ್ಮ ಭೂಷಣ ಪುರಸ್ಕಾರವನ್ನೂ ಪಡೆದಿದ್ದಾರೆ. ಇವರ ಸಂಘಟನೆ ಸಸ್ತಾಂಗ್ ಫೌಂಡೇಷನ್ ಆಂಧ್ರಪ್ರದೇಶದ ಮದನಪಳ್ಳಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆಯನ್ನೂ ನಡೆಸುತ್ತಿದೆ.

ತಿರುವನಂತಪುರದ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಇವರು, ಚಿಕ್ಕಂದಿನಿಂದಲೇ ಯೋಗಿಗಳ ಬದುಕಿನ ಬಗ್ಗೆ ಆಸಕ್ತರಾಗಿದ್ದರು. 19ನೇ ವಯಸ್ಸಿನಲ್ಲಿಯೇ ಹಿಮಾಲಯಕ್ಕೆ ಓಡಿ ಹೋಗಿ ಅಲ್ಲಿ ತಮ್ಮ ಗುರುವಿಗಾಗಿ ಹುಡುಕಾಡಿದರು.

‘Apprenticed to a Himalayan Master’ ಎಂಬ ಪುಸ್ತಕ ಬರೆದು, ತಮ್ಮ ಜೀವನದ ಸಾಹಸಗಳನ್ನು ಅದರಲ್ಲಿ ಬರೆದಿದ್ದಾರೆ. ಬದರೀನಾಥ್‌ನ ದೂರದ ಗುಹೆಯೊಂದರಲ್ಲಿದ್ದ ಯೋಗಿಯೊಬ್ಬರಲ್ಲಿ ಅವರು ಗುರುವನ್ನೂ ಕಂಡುಕೊಳ್ಳುತ್ತಾರೆ. ನಂತರ ಪ್ರಾಚೀನಾ ನಾಥ್ ಸಂಪ್ರದಾಯವನ್ನು ಕಲಿಯುತ್ತಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಇದೇ ಸಂಪ್ರದಾಯವರು.

ಸುಳ್ಳು ಹೇಳುತ್ತಾ ಆತ್ಮವಂಚನೆ ಮಾಡಿಕೊಂಡು ಕೂರುವ ಕಾಲವಲ್ಲ: ವಾಸ್ತವದ ಸತ್ಯ ಒಪ್ಪಿಕೊಂಡು ಗಂಭೀರವಾಗಿ ಚಿಂತಿಸಿ ಅಗತ್ಯ ಕ್ರಮ ಕೈಗೊಳ್ಳುವ ತುರ್ತು ಸಮಯ: ಕಾಂಗ್ರೆಸ್ ಆರೋಪ