ತಿರುವನಂತಪುರಂ: ಸಿಪಿಐ(ಎಂ) ಸ್ಥಳೀಯ ಮುಖಂಡರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಪಿ.ಬಿ ಸಂದೀಪ್ ಕುಮಾರ್ ಕೊಲೆಯಾದ ವ್ಯಕ್ತಿ. ಈ ಘಟನೆ ಗುರುವಾರ ರಾತ್ರಿ 8.30ರ ಸುಮಾರಿಗೆ ತಿರುವಲ್ಲಾ ಎಂಬಲ್ಲಿ ನಡೆದಿದೆ. ಸಂದೀಪ್ ಅವರು ಮಾಜಿ ಪೆರಿಂಗಾರ ಪಂಚಾಯತ್ ಸದಸ್ಯರಾಗಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಸ್ಥಳೀಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ಡಿವೈಎಫ್‌ಐ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಮತ್ತು ಪೆರಿಂಗಾರದಲ್ಲಿ ಪಕ್ಷವನ್ನು ಬಲಪಡಿಸಲು ಹೆಚ್ಚು ಶ್ರಮಿಸುತ್ತಿದ್ದರು.

ಘಟನೆ ಹಿನ್ನೆಲೆ:
ಸಂದೀಪ್ ಅವರು ಪಕ್ಷದ ಕಚೇರಿಯಿಂದ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೋರಿಯಲ್ಲಿ ಕುಳಿತ್ತಿದ್ದ ಆರು ಮಂದಿಯ ಗುಂಪೊಂದು ಅವರನ್ನು ಕಂಡು ಬೆನ್ನೆಟ್ಟಿದೆ. ಅಲ್ಲದೆ ಸಮೀಪದ ಗದ್ದೆಯಲ್ಲಿ ಸಂದೀಪ್ ಅವರನ್ನು ಚಾಕುವಿನಿಂದ ಇರಿದು ಕೊಂದಿದೆ. ಪಕ್ಷದ ಕಾರ್ಯಕರ್ತರು ಸಂದೀಪ್ ಅವರನ್ನು ಉಳಿಸಲು ಸ್ಥಳಕ್ಕೆ ಆಗಮಿಸಿದರೂ, ದಾಳಿಕೋರರು ಚಾಕು ತೋರಿಸಿ ಬೆದರಿಸಿದ್ದಾರೆ. ಹಲ್ಲೆಗೊಳಗಾದ ಸಂದೀಪ್ ಅವರನ್ನು ತಿರುವಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಲಾಗಲಿಲ್ಲ.

ಈ ಬಗ್ಗೆ ತಿರುವಲ್ಲಾ ಡಿವೈಎಸ್ಪಿ ಟಿ ರಾಜಪ್ಪ ಮಾತನಾಡಿ, ತಿರುವಲ್ಲಾದ ಚತ್ತಂಕರಿಯಲ್ಲಿ ಗುರುವಾರ ರಾತ್ರಿ ಬೈಕಿನಲ್ಲಿ ಬಂದ ಆರು ಮಂದಿ ಸಂದೀಪ್ ಮೇಲೆ ದಾಳಿ ನಡೆಸಿದ್ದಾರೆ. ಇದು ರಾಜಕೀಯಕ್ಕಾಗಿ ನಡೆದ ಕೊಲೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಕುರಿತು ತನಿಖೆ ಪ್ರಾರಂಭಿಸಿದ್ದು, ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ತಿಳಿಸಿದರು.

ಸಂದೀಪ್ ಅವರ ಹತ್ಯೆ ಪೂರ್ವ ನಿಯೋಜಿತವಾಗಿದ್ದು, ದಾಳಿಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಸಿಪಿಐ(ಎಂ) ಜಿಲ್ಲಾ ನಾಯಕತ್ವ ಆರೋಪಿಸಿದ್ದಾರೆ. ಸಂದೀಪ್ ಪಕ್ಷದ ಜನಪ್ರಿಯ ಮುಖಂಡರಲ್ಲಿ ಒಬ್ಬರಾಗಿದ್ದರು. ಇದರಿಂದ ಸಹಿಸದ ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ಸಂದೀಪ್ ಅವರನ್ನು ಹತ್ಯೆಗೈದಿದ್ದಾರೆ ಎಂದು ಸಿಪಿಐ(ಎಂ) ಪತ್ತನಂತಿಟ್ಟ ಜಿಲ್ಲಾ ಮುಖಂಡ ಸನಲ್ ಕುಮಾರ್ ಆರೋಪಿಸಿದ್ದಾರೆ.

ಸಂದೀಪ್ ಹತ್ಯೆಯನ್ನು ಖಂಡಿಸಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಾತನಾಡಿ, ಆರ್‌ಎಸ್‌ಎಸ್ ರಾಜ್ಯದಲ್ಲಿ ಭಯೋತ್ಪಾದಕ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ತಿರುವನಂತಪುರದಲ್ಲಿ ನೀಡಿರುವ ಹೇಳಿಕೆಯಲ್ಲಿ ಪಕ್ಷದ ಕಾರ್ಯದರ್ಶಿ ಹತ್ಯೆಯ ಹಿಂದಿನ ಪಿತೂರಿಯನ್ನು ಹೊರತರಬೇಕು ಎಂದು ಒತ್ತಾಯಿಸಿದರು.