ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿಯ ಹತ್ಯೆ : ಅನಾಥವಾದ 4 ವರ್ಷದ ಮಗು! - BC Suddi
ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿಯ ಹತ್ಯೆ : ಅನಾಥವಾದ 4 ವರ್ಷದ ಮಗು!

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿಯ ಹತ್ಯೆ : ಅನಾಥವಾದ 4 ವರ್ಷದ ಮಗು!

ಮುಂಬೈ: ಭಾರತೀಯ ಮೂಲದ ಟೆಕ್ಕಿ ಮತ್ತು ಆತನ ಗರ್ಭಿಣಿ ಪತ್ನಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಅಮೆರಿಕದ ಮನೆಯಲ್ಲಿ ನಡೆದಿದೆ. ದಂಪತಿಯ ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗಳು ಅಳುವುದನ್ನು ನೋಡಿ ನೆರೆಮನೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಶುಕ್ರವಾರ ಕುಟುಂಬದ ಮೂಲಗಳು ತಿಳಿಸಿವೆ.

ನಾರ್ಥ್​ ಅರ್ಲಿಂಗ್ಟನ್​ ಅಪಾರ್ಟ್​ಮೆಂಟ್​ನಲ್ಲಿ ದಂಪತಿಯ ಮೃತದೇಹ ಚಾಕು ಇರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಬ್ಬರಿಗೂ ಹಲವು ಬಾರಿ ಹೊಟ್ಟೆಗೆ ಚಾಕುವಿನಿಂದ ಇರಿದಿರುವುದು ಸ್ಪಷ್ಟವಾಗಿದೆ. ಮೃತರನ್ನು ಬಾಲಾಜಿ ಭಾರತ್​ ರುದ್ರಾವರ್​ (32) ಮತ್ತು ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್​ (30) ಎಂದು ಗುರುತಿಸಲಾಗಿದೆ. ನ್ಯೂಜರ್ಸಿಯ ನಾರ್ಥ್​ ಅರ್ಲಿಂಗ್ಟನ್​ನಲ್ಲಿರುವ ರಿವರ್ ವ್ಯೂ ಗಾರ್ಡನ್ಸ್ ಸಂಕೀರ್ಣದ 21 ಗಾರ್ಡನ್​ ಟೆರೆಸ್​ ಅಪಾರ್ಟ್​ಮೆಂಟ್​ನಲ್ಲಿ ಮೃತದೇಹ ಪತ್ತೆಯಾಗಿವೆ.​

ಬುಧವಾರ ಮನೆಯ ಬಾಲ್ಕನಿಯಲ್ಲಿ ಮಗು ಅಳುವುದನ್ನು ನೋಡಿದ ನೆರೆಮನೆಯವರು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಲಿವಿಂಗ್​ ರೂಮ್​ನಲ್ಲಿ ದಂಪತಿ ಸತ್ತು ಬಿದ್ದಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾವು ಹೇಗೆ ಸಂಭವಿಸಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಆದರೆ, ದಂಪತಿ ಮೃತದೇಹಗಳು ಚಾಕು ಇರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ನನ್ನ ಸೊಸೆ 7 ತಿಂಗಳ ಗರ್ಭಿಣಿ ಆಗಿದ್ದಳು. ನಾವು ಮತ್ತೊಮ್ಮೆ ಅಮೆರಿಕ ಪ್ರವಾಸ ಮಾಡಲು ಪ್ಲಾನ್​ ಮಾಡಿಕೊಂಡಿದ್ದೆವು. ಅಷ್ಟರಲ್ಲಿ ಮಗ ಮತ್ತು ಸೊಸೆ ಮೃತಪಟ್ಟಿದ್ದಾರೆ. ಇಬ್ಬರು ಖುಷಿಯಾಗಿಯೇ ಇದ್ದರು ನೆರೆಮನೆಯವರೊಂದಿಗೂ ಚೆನ್ನಾಗಿಯೇ ಇದ್ದರು. ಆದರೆ, ಯಾಕೆ ಹೀಗಾಯಿತು ಎಂಬುದು ನಮಗೂ ತಿಳಿಯುತ್ತಿಲ್ಲ. ಇಬ್ಬರ ಮೃತದೇಹ ತಲುಪಲು ಸುಮಾರು 8 ರಿಂದ 10 ದಿನಗಳು ಆಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಮೊಮ್ಮಗಳು ಸದ್ಯ ನನ್ನ ಮಗನ ಸ್ನೇಹಿತನ ಮನೆಯಲ್ಲಿದ್ದಾಳೆ ಎಂದು ಮೃತನ ತಂದೆ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಬಾಲಾಜಿ ರುದ್ರಾವರ್​ ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಅಂಬಾಜೋಗೈ ನಿವಾಸಿ. ಐಟಿ ವೃತ್ತಿಪರನಾಗಿದ್ದ ಬಾಲಾಜಿ 2014ರ ಡಿಸೆಂಬರ್​ನಲ್ಲಿ ಮದುವೆ ಆದ ಬಳಿಕ 2015ರಲ್ಲಿ ಪತ್ನಿ ಜತೆ ಕೆಲಸಕ್ಕೆಂದು ಅಮೆರಿಕಕ್ಕೆ ತೆರಳಿದ್ದರು.

error: Content is protected !!