ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ತೆರಿಗೆಗಳ ಕಡಿತದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಇಂಧನಗಳ ಬೆಲೆಗಳು ಸತತವಾಗಿ ಏರುಗತಿಯಲ್ಲಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವರು, ಜನರ ಕಷ್ಟ ನಮಗೆ ಅರ್ಥವಾಗುತ್ತೆ. ಆದರೆ ನಾವು ಧರ್ಮಸಂಕಟದ ಪರಿಸ್ಥಿತಿ ಅನುಭವಿಸುತ್ತಿದ್ದೇವೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ಗಳ ಮೇಲೆ ಕೇಂದ್ರ ಸರ್ಕಾರ ಮಾತ್ರ ತೆರಿಗೆ ವಿಧಿಸುತ್ತಿಲ್ಲ. ರಾಜ್ಯ ಸರ್ಕಾರಗಳೂ ತೆರಿಗೆ ಹಾಕುತ್ತಿವೆ. ಬೆಲೆ ತಗ್ಗಿಸಬೇಕು ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಇಂಧನ ಬೆಲೆ ಏರಿಕೆ ಸಮಸ್ಯೆಯ ರಾಜ್ಯ ಸರ್ಕಾರಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಇಂಧನ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆ ಆಗುತ್ತಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆದರೆ ನಾವು ಧರ್ಮಸಂಕಟದ ಸ್ಥಿತಿಯಲ್ಲಿದ್ದೇವೆ. ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಆಶಯ ನಮಗೂ ಇದೆ ಎಂದು ಸಚಿವರು ಹೇಳಿದರು.