ಚಂಡೀಗಢ : ಕೃಷಿ ಕಾನೂನುಗಳನ್ನು ವಿರೋಧಿಸಿ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಇನ್ನು ಮುಂದೆ ಪ್ರತಿ ಲೀಟರ್ ಹಾಲನ್ನು 100 ರೂ . ಗೆ ಮಾರಾಟ ಮಾಡುವಂತೆ ಹರಿಯಾಣದ ಹಿಸ್ಸಾರ್ ‍ ಕಾಫ್ ಪಂಚಾಯ್ತಿ ರೈತರಿಗೆ ಸಲಹೆ ನೀಡಿದೆ . ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸುಮಾರು 90 ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಹಂತ ಹಂತವಾಗಿ ತಮ್ಮ ಪ್ರತಿಭಟನೆಯನ್ನು ಹೆಚ್ಚಿಸುತ್ತಿದ್ದಾರೆ . ಸಹಕಾರ ಸಂಘಗಳ ಮೂಲಕ ಸರ್ಕಾರ ಖರೀದಿಸುವ ಹಾಲಿನ ಬೆಲೆಯನ್ನು ಲೀಟರ್ ‍ ಗೆ 100 ರೂ . ನಿಗದಿ ಮಾಡುವಂತೆ ರೈತರಿಗೆ ಕಾಫ್ ಸದಸ್ಯರು ಸಲಹೆ ನೀಡಿದ್ದಾರೆ .

ಇತ್ತೀಚೆಗೆ ಗುಜರಾತ್ ಹಾಲು ಮಾರುಕಟ್ಟೆ ಸಹಕಾರ ಸಂಘಗಳು ಪ್ರತಿ ಲೀಟರ್ ಹಾಲಿನ ದರದಲ್ಲಿ 2 ರೂ . ಹೆಚ್ಚಿಸಿದ್ದವು . ಅದರ ಬೆನ್ನಲ್ಲೇ ಈಗ ಹರಿಯಾಣ ರೈತರು ದರ ಏರಿಕೆಗೆ ಮುಂದಾಗಿರುವುದು ಜನ ಜೀವನವನ್ನು ಆತಂಕ್ಕೀಡು ಮಾಡಿದೆ . ಪ್ರಸ್ತುತ ಹರಿಯಾಣದಲ್ಲಿ ಪ್ರತಿ ಲೀಟರ್ ಹಾಲಿನ ದರ 55 ರಿಂದ 60 ರೂ . ಇದ್ದು , ಅದನ್ನು ಏಕಾಕಿ ಹೆಚ್ಚಳ ಮಾಡಲು ಕಾಫ್ ಪಂಚಾಯ್ತಿ ನಿರ್ಧರಿಸಿದೆ . ಸರ್ಕಾರದ ಸಹಕಾರ ಸಂಘಗಳಿಗೆ ಮಾರಾಟ ಮಾಡುವ ಹಾಲಿನ ದರವನ್ನು ಮಾತ್ರ ಏರಿಕೆ ಮಾಡಿ , ಉಳಿದಂತೆ ಜನ ಸಾಮಾನ್ಯರಿಗೆ 55 ರಿಂದ 60 ರೂ . ನಲ್ಲೇ ಮಾರಾಟ ಮಾಡಿ ಎಂದು ಕಾಫ್ ಮುಖಂಡರು ಸಲಹೆ ಮಾಡಿದ್ದಾರೆ .