ಶ್ರೀನಗರ: ಉಗ್ರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಡಾಬಾ ಮಾಲೀಕನ ಪುತ್ರ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶ್ರೀನಗರ ಮೇಯರ್ ಜುನೈದ್ ಅಜೀಮ್ ಮಟ್ಟು ಅವರು, ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಎಸ್‌ಎಂಹೆಚ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣಾ ಢಾಬಾ ಮಾಲೀಕರ ಪುತ್ರ ಆಕಾಶ್ ಮೆಹ್ರಾ ಅವರು ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಶ್ರೀನಗರದ ದುರ್ಗಾನಾಗ್ ಡಾಲ್ಗೇಟ್ ಪ್ರದೇಶದಲ್ಲಿ ಫೆ.17 ರಂದು ಭಯೋತ್ಪಾದಕರು ಢಾಬಾ ಮಾಲೀಕ ಮತ್ತು ಆತನ ಪುತ್ರನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಢಾಬಾ ಮಾಲೀಕರ 22 ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದರು.