ಕುಕ್ಕೆ: ನಾಗನ ಪ್ರಸಿದ್ಧ ಆರಾಧನಾ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪ್ರಪಂಚದ ಎಲ್ಲಾ ಕ್ಷೇತ್ರಗಳಿಗಿಂತಲೂ ಶ್ರೇಷ್ಠವಾದ ಕ್ಷೇತ್ರವಾಗಿದೆ. ಇಲ್ಲಿ ವರ್ಷಂಪ್ರತಿ ಆಚರಿಸಲಾಗುವ ಚಂಪಾ ಷಷ್ಠಿಯ ದಿನದಂದು ಕ್ಷೇತ್ರದ ಆರಾಧ್ಯಮೂರ್ತಿಯಾದ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವವು ನಡೆಯುತ್ತದೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಎಳೆಯಲಾಗುವ ರಥವನ್ನು ಹಗ್ಗದಿಂದ ಕಟ್ಟಿ ತಯಾರು ಮಾಡಿದರೆ ಸುಬ್ರಹ್ಮಣ್ಯದ ಈ ರಥವನ್ನು ಕೇವಲ ಬಿದಿರು ಹಾಗೂ ನಾಗರಬೆತ್ತ ಬಳಸಿ ಸಿದ್ಧಗೊಳಿಸಲಾಗುತ್ತೆ. ಇದೇ ಕಾರಣಕ್ಕಾಗಿ ಈ ರಥ ರಾಜ್ಯದಲ್ಲೇ ಇರುವ ಎಲ್ಲಾ ಕ್ಷೇತ್ರಗಳ ರಥಗಳಿಗಿಂತ ವಿಶಿಷ್ಟವಾಗಿದೆ. ಅಂದ ಹಾಗೆ ಈ ರಥ ಕಟ್ಟಲು ಬಳಸುವ ಬಿದಿರು ಎಲ್ಲಿಂದ ತರಲಾಗುತ್ತದೆ ಮತ್ತು ಇದಕ್ಕೆ ಅನುಸರಿಸುವ ಧಾರ್ಮಿಕ ವಿಧಿ-ವಿಧಾನಗಳು ಏನು ಅನ್ನೋದರ ಕುರಿತ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ನಡೆಯುವ ಲಕ್ಷ ದೀಪೋತ್ಸವ ಹಾಗೂ ಚಂಪಾ ಷಷ್ಠಿ ರಥೋತ್ಸವ ಸಂಭ್ರಮಕ್ಕೆ ದೇಶದ ವಿವಿಧ ಕಡೆಗಳಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಬಾರಿ ಡಿಸೆಂಬರ್ 1 ರಿಂದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾ ಷಷ್ಠಿ ಮಹೋತ್ಸವ ಆರಂಭಗೊಳ್ಳಲಿದ್ದು, ಡಿಸೆಂಬರ್ 8 ಮತ್ತು 9 ರಂದು ಸುಬ್ರಹ್ಮಣ್ಯ ಸ್ವಾಮಿಯ ಪಂಚಮಿ ಮತ್ತು ಬ್ರಹ್ಮರಥೋತ್ಸವ ನಡೆಯಲಿದೆ.

ಹಲವು ವಿಶೇಷತೆಗಳನ್ನು ಹೊಂದಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯಂದು ಏಳೆಯುವ ರಥವೂ ವಿಶಿಷ್ಠ ರೀತಿಯಲ್ಲಿ ಸಜ್ಜುಗೊಳ್ಳುತ್ತದೆ. ದೇಶದಲ್ಲೆಡೆ ಇರುವ ಕ್ಷೇತ್ರಗಳ ರಥಗಳನ್ನು ಕಟ್ಟುವಾಗ ಹಗ್ಗಗಳನ್ನು ಉಪಯೋಗಿಸಿದರೆ ಇಲ್ಲಿ ಕಾಡಿನಿಂದ ತಂದ ಬಿದಿರು ಹಾಗೂ ನಾಗರ ಬೆತ್ತಗಳೇ ಹಗ್ಗದ ರೂಪದಲ್ಲಿ ಬಳಕೆಯಾಗುತ್ತದೆ‌. ಸಹಸ್ರಾರು ವರ್ಷಗಳ ಹಿಂದಿನಿಂದಲೇ ಈ ರಥವನ್ನು ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರೇ ಸಿದ್ದಪಡಿಸುತ್ತಾ ಬರುತ್ತಿದ್ದಾರೆ.

ಸುಬ್ರಹ್ಮಣ್ಯದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಕುಕ್ಕೆಯ ಸುಬ್ರಹ್ಮಣ್ಯ ಸ್ವಾಮಿ ಇದೇ ಮಲೆಕುಡಿಯರಿಗೆ ಕಾಡಿನಲ್ಲಿ ಸಿಕ್ಕಿದ್ದು, ಇದರಿಂದಾಗಿಯೇ ಮಲೆಕುಡಿಯ ಜನಾಂಗಕ್ಕೆ ಕ್ಷೇತ್ರದ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವ ಅವಕಾಶ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹುಣ್ಣಿಮೆಯ ದಿನ ರಥ ಕಟ್ಟಲು ಮೂಹೂರ್ತ ಮಾಡಿ, ದೇವರ ಪ್ರಸಾದ, ಅಕ್ಕಿ ಸಾಮಾಗ್ರಿಗಳೊಂದಿಗೆ ಮಲೆಕುಡಿಯರ ಒಂದು ಗುಂಪು ದಟ್ಟ ಕಾಡಿನೊಳಗೆ ಪ್ರವೇಶಿಸುತ್ತದೆ. ನಾಲ್ಕೈದು ದಿನಗಳನ್ನು ಕಾಡಿನಲ್ಲೇ ಕಳೆದು ಬಿದಿರಿನ ಬೆತ್ತ ತಯಾರಿಸಿ, ಹಿರಿಯರ ಮಾರ್ಗದರ್ಶನದಂತೆ ರಥ ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ.