ಕೊರೊನಾ ಟೆಸ್ಟಿಂಗ್‌ನಲ್ಲಿ ಕಳ್ಳಾಟವಾಡಿದ ಆರೋಗ್ಯ ಸಿಬ್ಬಂದಿ ವಜಾ - BC Suddi
ಕೊರೊನಾ ಟೆಸ್ಟಿಂಗ್‌ನಲ್ಲಿ ಕಳ್ಳಾಟವಾಡಿದ ಆರೋಗ್ಯ ಸಿಬ್ಬಂದಿ ವಜಾ

ಕೊರೊನಾ ಟೆಸ್ಟಿಂಗ್‌ನಲ್ಲಿ ಕಳ್ಳಾಟವಾಡಿದ ಆರೋಗ್ಯ ಸಿಬ್ಬಂದಿ ವಜಾ

ಬೆಂಗಳೂರು : ಸೋಂಕು ನಿಯಂತ್ರಣದ ಉದ್ದೇಶದಿಂದ ರಾಜ್ಯ ಸರ್ಕಾರವು ಕೊರೊನಾ ಟೆಸ್ಟ್‌ ಟಾರ್ಗೆಟ್‌ ನೀಡಿದೆ. ಈ ಟಾರ್ಗೆಟ್‌ ತಲುಪಲು ಬಿಬಿಎಂಪಿ ಗುತ್ತಿಗೆ ಆಧಾರಿತ ಸಿಬ್ಬಂದಿ ಕಳ್ಳದಾರಿ ಹಿಡಿದ ಪ್ರಕರಣ ಬೆಳಕಿಗೆ ಬಂದಿದೆ. ಕೊರೊನಾ ಟೆಸ್ಟ್‌ ಎಂದರೆ ಗಂಟಲು ದ್ರವ ಸಂಗ್ರಹ ಮಾಡಿ ಕಳುಹಿಸುವುದಾದರೆ, ಈ ಸಿಬ್ಬಂದಿ ಲಿಕ್ವಿಡ್‌ಗೆ ಖಾಲಿ ಕಡ್ಡಿ ಹಾಕಿ ಟೆಸ್ಟಿಂಗ್‌ಗೆ ಕಳಿಸಿದ್ದಾನೆ.

ಬೆಂಗಳೂರಿನ ಯಲಹಂಕ ವಲಯದ ಕೊಡಿಗೆಹಳ್ಳಿ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟಿಂಗ್‌ ವಿಚಾರದಲ್ಲಿ ಈ ಕಳ್ಳಾಟ ನಡೆದಿದ್ದು ಇದರ ವಿಡಿಯೋ ಶುಕ್ರವಾರ ವೈರಲ್‌ ಆಗಿದೆ. ಸಿಬ್ಬಂದಿಯನ್ನು ಪ್ರಸ್ತುತ ವಜಾ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ”ನಿನ್ನೆಯೇ ಈ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಎಫ್‌ಐಆರ್ ಕೂಡಾ ದಾಖಲು ಮಾಡಲಾಗಿದ್ದು ತನಿಖೆ ನಡೆಯುತ್ತಿದೆ. ರಾಜ್ಯದಲ್ಲೆಲ್ಲೂ ಇಂತಹ ಘಟನೆ ನಡೆದಿಲ್ಲ” ಎಂದು ಹೇಳಿದ್ದಾರೆ.

ಆದರೆ ಇಷ್ಟರವರೆಗೆ ಈ ಕಳ್ಳಾಟದಿಂದಾಗಿ ಏನೆಲ್ಲಾ ತೊಂದರೆ ಉಂಟಾಗಿರಬಹುದು ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.