ಕೊರೊನಾ ರೋಗಿಗಳಿಗೆ ಸ್ವಯಂ ಆರೈಕೆಗಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ - BC Suddi
ಕೊರೊನಾ ರೋಗಿಗಳಿಗೆ ಸ್ವಯಂ ಆರೈಕೆಗಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ

ಕೊರೊನಾ ರೋಗಿಗಳಿಗೆ ಸ್ವಯಂ ಆರೈಕೆಗಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಆಸ್ಪತ್ರೆಗಳಿಗೆ ದಾಖಲಾಗುವ ಅನಿವಾರ್ಯತೆಯನ್ನು ಸಾಧ್ಯವಾದಷ್ಟೂ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಕ ಹಂತದ ಕೊರೊನಾ ಸೋಂಕು ಇರುವ ರೋಗಿಗಳಿಗೆ ಚಿಕಿತ್ಸೆ, ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ್ದು, ಸ್ವಯಂ ಆರೈಕೆಗಾಗಿ ಪ್ರೋನಿಂಗ್ ವಿಧಾನವನ್ನು ಅನುಸರಿಸಲು ಸಲಹೆ ನೀಡಿದೆ.

ಪ್ರೋನಿಂಗ್ ವಿಧಾನ ಅನುಸರಿಸುವ ರೀತಿ:

ಪ್ರೋನಿಂಗ್ ಚಿಕಿತ್ಸಾ ವಿಧಾನದಲ್ಲಿ ರೋಗಿಗಳನ್ನು ಹೊಟ್ಟೆ ಕೆಳಭಾಗಕ್ಕೆ ಬರುವ ಭಂಗಿಯಲ್ಲಿ ಮಲಗಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತದೆ. ದಿನವೊಂದಕ್ಕೆ ಒಟ್ಟು 16-18 ಗಂಟೆಗಳ ಕಾಲ ಈ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ.

ಈ ಪ್ರೋನಿಂಗ್​ ಮಾಡಲು ನಾಲ್ಕರಿಂದ ಐದು ದಿಂಬುಗಳ ಅವಶ್ಯಕತೆ ಇದ್ದು, ಒಂದು ದಿಂಬು ಕುತ್ತಿಗೆ ಕೆಳಗೆ, ಇನ್ನೊಂದು ಎದೆಯ ಕೆಳಗೆ ಇನ್ನೊಂದು ತೊಡೆ ಹಾಗೂ ಉಳಿದ ಎರಡು ದಿಂಬುಗಳನ್ನ ಮೊಣಕಾಲಿನ ಕೆಳಗೆ ಇಡಬೇಕು. ಇದೇ ಸ್ಥಿತಿಯಲ್ಲಿ ಬೋರಲು ಹಾಕಿ 30 ನಿಮಿಷಗಳ ಕಾಲ ಮಲಗಬೇಕು.

ಇನ್ನು ಪ್ರೋನಿಂಗ್‌ನಿಂದ ಸುಲಭವಾಗಿ ಉಸಿರಾಟ, ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಕೆ ಸುಧಾರಣೆ ಸಾಧ್ಯವಾಗಲಿದ್ದು, ಮನೆಯಲ್ಲಿಯೇ ಐಸೊಲೇಷನ್‌ಗೆ ಒಳಗಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಕೊರೊನಾ ರೋಗಿಗಳಿಗೆ ಇದು ಉತ್ತಮ ಚೇತರಿಕೆ ವಿಧಾನವಾಗಿದ್ದು, ಸಮಯಕ್ಕೆ ಸರಿಯಾಗಿ ಪ್ರೋನಿಂಗ್ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹು ಎಂದು ಸಚಿವಾಲಯ ತಿಳಿಸಿದೆ.

ಉಸಿರಾಟದ ಸಮಸ್ಯೆಯಲ್ಲಿರುವ ಕೊರೊನಾ ರೋಗಿಗಳು ಹಾಗೂ ಆಮ್ಲಜನಕ ಪೂರೈಕೆ ಪ್ರಮಾಣ 94 ಕ್ಕಿಂತಲೂ ಕಡಿಮೆ ಬರುವ ವ್ಯಕ್ತಿಗಳಿಗೆ, ರಕ್ತದ ಒತ್ತಡ, ಬ್ಲಡ್ ಶುಗರ್ ವ್ಯತ್ಯಯ, ತಾಪಮಾನ ಹೆಚ್ಚಾಗಿರುವ ರೋಗಿಗಳಿಗೆ ಮಾತ್ರ ಪ್ರೋನಿಂಗ್ ವಿಧಾನವನ್ನು ಮಾಡಬಹುದು ಎಂದು ಹೇಳಿದೆ.

ಊಟ ಮಾಡಿದ ಕೆಲ ಗಂಟೆಗಳ ಬಳಿಕ ತಮಗೆ ಮಾಡಬಹುದು ಎಂದು ಅನಿಸಿದವರು ಮಾತ್ರ ಪ್ರೋನಿಂಗ್‌ ಅನ್ನು ಅಭ್ಯಾಸ ಮಾಡಲು ಸಚಿವಾಲಯ ಸಲಹೆ ನೀಡಿದ್ದು ಗರ್ಭಿಣಿಯರು, ಹೃದಯ ಸಮಸ್ಯೆ ಇರುವವರು, ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಿಸುತ್ತಿರುವವರು, ಅಸ್ಥಿರವಾದ ಬೆನ್ನುಮೂಳೆಯ ಎಲುಬಿನ ಸಮಸ್ಯೆ ಇರುವವರು ಪೆಲ್ವಿಕ್ ಫ್ರಾಕ್ಚರ್ ಗಳ ಸಮಸ್ಯೆ ಇರುವವರು ಈ ವಿಧಾನವನ್ನು ಅನುಸರಿಸಬಾರದು ಎಂದು ಸಚಿವಾಲಯ ಸೂಚಿಸಿದೆ.

ಇನ್ನು ವೈದ್ಯಕೀಯ ಮಾರ್ಗಸೂಚಿಗಳನ್ನೂ ಕೂಡ ಬಿಡುಗಡೆ ಮಾಡಿರುವ ಆರೋಗ್ಯ ಸಚಿವಾಲಯ, ತೀವ್ರವಾದ ರೋಗ ಇದ್ದರೆ ಮಾತ್ರ ತುರ್ತು ಬಳಕೆ ಅನುಮತಿಯ ಆಧಾರದಲ್ಲಿ ಐಸಿಯುಗೆ ದಾಖಲಾಗಿರುವ ಮತ್ತು ರೋಗ ತೀವ್ರಗೊಂಡ 24-48 ಗಂಟೆಗಳಲ್ಲಿ ಟೋಸಿಲಿಜುಮಾಬ್ ಔಷಧವನ್ನು ನೀಡುವುದಕ್ಕೆ ಸಚಿವಾಲಯ ಸಲಹೆ ನೀಡಿದೆ.