ಬೆಂಗಳೂರು: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ, “6 ಸಚಿವರು ಏಕೆ ಸುದ್ದಿ ಪ್ರಸಾರಕ್ಕೆ ಮುಂಜಾಗ್ರತೆಯಲ್ಲಿ ತಡೆ ತರುತ್ತಿದ್ದಾರೆ. ಸರ್ಕಾರದ ರಚನೆಯಿಂದ ಹಿಡಿದು ಸಂಪುಟ ವಿಸ್ತರಣೆಯವರೆಗೂ ಬೃಹತ್ ಹಗರಣ ಅಡಗಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.

“ಕುಂಬಳಕಾಯಿ ಕಳ್ಳ ಅಂದರೆ ಕರ್ನಾಟಕದ ಬಿಜೆಪಿ ಸಚಿವರೇಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ. ಸಿಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟವೇ ಏಕೆ ಬೆಚ್ಚಿ ಬೀಳುತ್ತಿದೆ..?.” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಹೊರ ಬರುತ್ತಿದ್ದಂತೆ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಾಂಬೆ ಫ್ರೆಂಡ್ಸ್ ಎಂತಲೇ ಕರೆಸಿಕೊಳ್ಳುವ ಸಚಿವರ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ.

ಕರ್ನಾಟಕ ರಾಜ್ಯ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಮತ್ತು ಮಾನಹಾನಿಯ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವ ಡಾ. ಕೆ. ಸುಧಾಕರ್, ಬಿ ಸಿ ಪಾಟೀಲ್, ಶಿವರಾಜ್ ಹೆಬ್ಬಾರ್, ಡಾ. ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಚಿವರು ಸಲ್ಲಿಸಿದ ಅರ್ಜಿ ಶನಿವಾರ ವಿಚಾರಣೆಗೆ ಬರಲಿದೆ.