ಬೆಂಗಳೂರು: ಯುವತಿಗೆ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟದಿ0ದ ವಜಾ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಆಗ್ರಹಿಸಿದ್ದಾರೆ. ಇವರ ಜೊತೆಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಮೌರ್ಯ ವೃತ್ತದ ಬಳಿ ಮಾ.3 ರಂದು ಪ್ರತಿಭಟನೆ ನಡೆಸಿದರು.

ಆಮ್ ಆದ್ಮಿ ಪಕ್ಷ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, ಕರ್ನಾಟಕದ ಘನತೆಗೆ ಇಂತಹ ರಾಜಕಾರಣಿಗಳು ಕಪ್ಪು ಚುಕ್ಕೆ, ಮಹಿಳಾ ದಿನಾಚರಣೆ ಹತ್ತಿರವಿರುವಾಗಲೇ ಇಂತಹ ಕೆಟ್ಟ ಘಟನೆ ನಡೆದಿದೆ. ಸರ್ಕಾರಕ್ಕೆ ಮಹಿಳಾ ದಿನಾಚರಣೆ ನಡೆಸುವಷ್ಟು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. ಕರ್ನಾಟಕ ಭವನವನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಂಡಿರುವ ರಮೇಶ್ ಜಾರಕಿಹೊಳಿ ಅವರು ಈ ಕೂಡಲೇ ಶಾಸಕ ಸ್ಥಾನದಿಂದಲೂ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಜಾ ಗೊಳಿಸಬೇಕು ಕುಶಲ ಸ್ವಾಮಿ ಆಗ್ರಹಿಸಿದರು.

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು ಮಾತನಾಡಿ, ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದೇವೆ ಎಂಬುದನ್ನು ಮರೆತು ಮಹಿಳೆಯರ ಜೊತೆ ಅನುಚಿತವಾಗಿ ನಡೆದುಕೊಳ್ಳುವ ಇಂತಹ ಕೆಟ್ಟ ರಾಜಕಾರಣಿಗಳನ್ನು ಈ ರಾಜ್ಯದ ಹೆಣ್ಣು ಮಕ್ಕಳು ಕ್ಷಮಿಸುವುದಿಲ್ಲ ಎಂದರು. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದವರಿಗೆ ಸಚಿವ ಸ್ಥಾನ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿಮ್ಮ ಸರ್ಕಾರದ ಮೇಲೆ ಮಹಿಳೆಯರಿಗೆ ಕಿಂಚಿತ್ತೂ ನಂಬಿಕೆ ಇಲ್ಲ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸರ್ಕಾರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಸದಸ್ಯರಾದ ಉಷಾ ಮೋಹನ್, ಪಲ್ಲವಿ ಚಿದಂಬರ, ಯೋಗಿತಾ ರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.