ಸಂಭ್ರಮಾಚರಣೆಗೆ ಗರಂ ಆದ  ಚುನಾವಣಾ ಆಯೋಗ : ಮುಖ್ಯ ಕಾರ್ಯದರ್ಶಿಗಳಿಗೆ  ವಾರ್ನಿಂಗ್‌ - BC Suddi
ಸಂಭ್ರಮಾಚರಣೆಗೆ ಗರಂ ಆದ  ಚುನಾವಣಾ ಆಯೋಗ : ಮುಖ್ಯ ಕಾರ್ಯದರ್ಶಿಗಳಿಗೆ  ವಾರ್ನಿಂಗ್‌

ಸಂಭ್ರಮಾಚರಣೆಗೆ ಗರಂ ಆದ  ಚುನಾವಣಾ ಆಯೋಗ : ಮುಖ್ಯ ಕಾರ್ಯದರ್ಶಿಗಳಿಗೆ  ವಾರ್ನಿಂಗ್‌

ನವದೆಹಲಿ : ದೇಶದಲ್ಲಿ ಪಂಚರಾಜ್ಯಗಳ ಚುನಾವಣಾ ಮತಎಣಿಕೆ ಕಾರ್ಯ ನಡೆಯುತ್ತಿದ್ದು ಹಲವು ರಾಜ್ಯದಲ್ಲಿ ಮುಂದಿನ ಆಡಳಿತದ ಚಿತ್ರಣ ಸ್ಪಷ್ಟವಾಗುತ್ತಲಿದೆ. ಏತನ್ಮಧ್ಯೆ ಹಲವು ಕಡೆಗಳಲ್ಲಿ ಜನರು ತಮ್ಮ ಬೆಂಬಲಿತರ ಗೆಲುವಿನ ಸಂಭ್ರಮಾಚರಣೆಯನ್ನು ಬಹಿರಂಗವಾಗಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಕೊರೊನಾ ಕಾರಣದಿಂದಾಗಿ ಈಗಾಗಲೇ ಸಂಭ್ರಮಾಚರಣೆಗೆ ನಿಷೇಧ ಹೇರಿದ್ದ ಚುನಾವಣಾ ಆಯೋಗ ಸಿಡಿಮಿಡಿಗೊಂಡಿದ್ದು ಸಂಭ್ರಮಾಚರಣೆ ನಡೆಸಲು ಬಿಡಬೇಡಿ, ಕೂಡಲೇ ಸಂಭ್ರಮಾಚರಣೆ ನಿಲ್ಲಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಕೊರೊನಾ ಸೋಂಕು ದೇಶದಲ್ಲಿ ತೀವ್ರತರವಾಗಿ ಏರಿಕೆ ಆಗುತ್ತಿರುವ ನಡುವೆಯೂ ಚುನಾವಣೆ ನಡೆಸಲು ಅವಕಾಶ ನೀಡಿದ ಕಾರಣಕ್ಕೆ ಮದ್ರಾಸ್‌ ಹೈಕೋರ್ಟ್ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಹಾಗೆಯೇ ಈ ಮಟ್ಟಿಗೆ ಕೊರೊನಾ ಹೆಚ್ಚಲು ಹಾಗೂ ಸಾವು ಸಂಭವಿಸಲು ಚುನಾವಣಾ ಆಯೋಗವೇ ಕಾರಣ ಎಂದು ಹೇಳಿತ್ತು.

ಮದ್ರಾಸ್‌ ಹೈಕೋರ್ಟ್‌ನ ಚಾಟಿ ಏಟಿಗೆ ಎಚ್ಚೆತ್ತ ಚುನಾವಣಾ ಆಯೋಗ ಕೂಡಲೇ ಆದೇಶವೊಂದನ್ನು ಹೊರಡಿಸಿ, ಚುನಾವಣಾ ಗೆಲುವು ಸಂಭ್ರಮಾಚರಣೆ ನಡೆಸುವಂತಿಲ್ಲ ಎಂದು ಖಡಕ್‌ ಆದೇಶ ನೀಡಿತ್ತು. ಆದರೆ ಈಗ ತಾವು ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಹರ್ಷಭರಿತ ಕಾರ್ಯಕರ್ತರು ಅಲ್ಲಲ್ಲಿ ಬೀದಿಗಿಳಿದು ಸಂಭ್ರಮಾಚರಿಸುತ್ತಿದ್ದಾರೆ.

ಕೊರೊನಾ ಕಾರಣದಿಂದಾಗಿ ತಾವು ನೀಡಿರುವ ಆದೇಶ ಉಲ್ಲಂಘಿಸಿರುವುದಕ್ಕೆ ತೀವ್ರ ಗರಂ ಆಗಿರುವ ಚುನಾವಣಾ ಆಯೋಗವು ಈ ಬಗ್ಗೆ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಕೂಡಲೇ ಸಂಭ್ರಮಾಚರಣೆಯನ್ನು ನಿಲ್ಲಿಸಿ, ಕೊರೊನಾ ಕಾರಣ ಯಾರೂ ಸಂಭ್ರಮಾಚರಣೆ ಮಾಡುವಂತಿಲ್ಲ. ಸಂಭ್ರಮಾಚರಣೆ ಮುಂದುವರಿದರೆ ರಾಜ್ಯ ಆರೋಗ್ಯಾಧಿಕಾರಿಗಳು ಮತ್ತು ಇತರ ಅಧಿಕಾರಿಗಳನ್ನು ಹೊಣೆಯಾಗಿಸಿ ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ಹೇಳಿದೆ.

ಸಂಭ್ರಮಾಚರಣೆಗೆ ತಡೆಯದಿದ್ದರೆ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮತ್ತು ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಆದೇಶ ಜಾರಿ ಮಾಡಿದೆ.

ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು