ನವದೆಹಲಿ: ಮುಂಬೈನಲ್ಲಿ ಟಾಟಾ ನೆಕ್ಸಾನ್ ಇವಿ ಬೆಂಕಿಗೆ ಆಹುತಿಯಾಗಿದೆ ಎಂಬ ವರದಿಗಳು ಹೊರಬಿದ್ದ ಬೆನಲ್ಲೇ ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟಾಟಾ ನೆಕ್ಸಾನ್ ಇವಿ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋವನ್ನು ರೀ ಟ್ವೀಟ್ ಮಾಡಿರುವ ಭವಿಶ್ ಅಗರ್ವಾಲ್, EV ಫೈರ್‌ಗಳು ನಡೆಯುತ್ತಲೇ ಇರುತ್ತವೆ. ಇದು ಎಲ್ಲಾ ಜಾಗತಿಕ ಉತ್ಪನ್ನಗಳಲ್ಲಿಯೂ ಸಂಭವಿಸುತ್ತಿದೆ. ICE (ಆಂತರಿಕ ದಹನಕಾರಿ ಎಂಜಿನ್) ಫೈರ್‌ಗಿಂತ EV ಫೈರ್‌ಗಳು ಆಗಾಗ್ಗೆ ಸಂಭವಿಸುತ್ತದೆ” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟ್ವೀಟ್‌ ಅನ್ನು ಆಟೋಕಾರ್ ಇಂಡಿಯಾದ ಸಂಪಾದಕ ಹೊರ್ಮಜ್ಡ್ ಸೊರಾಬ್ಜಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಭವಿಶ್ ಅಗರ್ವಾಲ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ ಅಗರ್ವಾಲ್ ಅವರು, ಹಿರಿಯ ಆಟೋಮೊಬೈಲ್ ಪತ್ರಕರ್ತರನ್ನು “ಪೆಟ್ರೋಲ್ ಮೀಡಿಯಾ” ಎಂದು ಕರೆದಿದ್ದರು.

ಓಲಾ ಎಲೆಕ್ಟ್ರಿಕ್ ಮತ್ತು ಇತರ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ದೋಷಪೂರಿತ ಬ್ಯಾಟರಿ ಮತ್ತು ಕಳಪೆ ವಿನ್ಯಾಸದ ಬಗ್ಗೆ ತೀವ್ರ ಪರಿಶೀಲನೆ ನಡೆಸಿದ್ದಾರೆ. ಏತನ್ಮಧ್ಯೆ, ಓಲಾ ಎಲೆಕ್ಟ್ರಿಕ್ ತನ್ನ ಸ್ವಂತ ಎಲೆಕ್ಟ್ರಿಕ್ ಕಾರನ್ನು ಒಂದೆರಡು ವರ್ಷಗಳಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ ಮತ್ತು ಇತ್ತೀಚೆಗೆ ಮೂಲಮಾದರಿಯನ್ನು ಪ್ರದರ್ಶಿಸಿದೆ. ಹೀಗಿರುವಾಗ ಭವಿಶ್ ಅಗರ್ವಾಲ್ ಅವರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.