1ರಿಂದ 9ನೇ ತರಗತಿ ಮಕ್ಕಳಿಗೆ ಸರ್ಕಾರದಿಂದ ಸಿಹಿ ಸುದ್ದಿ- ಪರೀಕ್ಷೆ ಬರೆಯದೇ ತೇರ್ಗಡೆ ... - BC Suddi
1ರಿಂದ 9ನೇ ತರಗತಿ ಮಕ್ಕಳಿಗೆ  ಸರ್ಕಾರದಿಂದ ಸಿಹಿ ಸುದ್ದಿ- ಪರೀಕ್ಷೆ ಬರೆಯದೇ ತೇರ್ಗಡೆ …

1ರಿಂದ 9ನೇ ತರಗತಿ ಮಕ್ಕಳಿಗೆ ಸರ್ಕಾರದಿಂದ ಸಿಹಿ ಸುದ್ದಿ- ಪರೀಕ್ಷೆ ಬರೆಯದೇ ತೇರ್ಗಡೆ …

ಬೆಂಗಳೂರು: ಕರೊನಾ ಮತ್ತೆ ಅಟ್ಟಹಾಸ ಬೀರಿದೆ. ಸ್ವಲ್ಪ ಸಮಾಧಾನದಿಂದ ಇದ್ದ ಜನರನ್ನು ಪುನಃ ಕಂಗೆಡುತ್ತಿದೆ. ಇದೇ ಕಾರಣಕ್ಕೆ ಕಳೆದ ವರ್ಷದಂತೆಯೇ ಈ ವರ್ಷವೂ ಶೈಕ್ಷಣಿಕ ವರ್ಷದ ಮೇಲೆ ಭಾರಿ ಪ್ರಭಾವ ಬೀಳುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ.

ಮಕ್ಕಳಿಗೆ ಶಾಲೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಸುದೀರ್ಘ ವಾದ- ಪ್ರತಿವಾದಗಳ ನಂತರ ಅಂತೂ ಗಟ್ಟಿ ಮನಸ್ಸು ಮಾಡಿ ಕೆಲವು ತರಗತಿಗಳಿಗೆ ಶಾಲೆಯನ್ನು ಪುನರಾರಂಭಿಸಲಾಗಿದೆ. ಆದರೆ ಇದೀಗ ಮತ್ತೆ ಕರೊನಾ ತನ್ನ ರುದ್ರಸ್ವರೂಪ ತೋರುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಪರೀಕ್ಷೆ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಈ ಕುರಿತು ನಾಳೆ (ಸೋಮವಾರ) ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಆದರೆ ಸರ್ಕಾರ ಇದಾಗಲೇ 9ನೇ ತರಗತಿಯವರೆಗೆ ಪರೀಕ್ಷೆ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದ ಸುಧಾಕರ್​ ಅವರು, ನಾಳೆ ಇನ್ನೊಂದು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಪರೀಕ್ಷೆ ಎಂದರೆ ತಲೆನೋವು ಎಂದುಕೊಳ್ಳುವ ಬಹುತೇಕ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಿಹಿ ಸುದ್ದಿ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ‘ಈ ಶೈಕ್ಷಣಿಕ ವರ್ಷ 1ರಿಂದ 9ರ ವರೆಗೆ ಎಲ್ಲರನ್ನೂ ತೇರ್ಗಡೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಪರೀಕ್ಷೆ ಮಾಡದೇ ತೇರ್ಗಡೆ ಮಾಡುವುದರ ಬಗ್ಗೆ ಗೊತ್ತಿಲ್ಲ. ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಿ ಮಾತಾಡುತ್ತೇನೆ’ ಎಂದು ಸುಧಾಕರ್​ ಹೇಳಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ಕೆಲವೊಂದು ಸಲಹೆಗಳನ್ನು ಪಡೆದುಕೊಳ್ಳಲಾಗುವುದು. ಮುಂದಿನ ಆರು ವಾರಗಳ ಕಾಲ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಅಪಾಯ ನಿಶ್ಚಿತ ಅಂತ ಅವರು ಆತಂಕ ವ್ಯಕ್ತಪಡಿಸಿದರು.

‘ನಾಲ್ಕು ವಾರಗಳಿಂದ 300 ಕೊರೊನಾ ಕೇಸ್ ಬರುತಿತ್ತು, ಈಗ ಮೂರು ಸಾವಿರ ಬರುತ್ತಿದೆ. ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ತೀವ್ರ ನಿಗಾ ಇಡಬೇಕಿದೆ. ಮುಂದಿನ 7 ರಿಂದ 8 ವಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಾಂತ್ರಿಕ ಸಲಹಾ ಸಮಿತಿಯಿಂದಲೂ ವರದಿ ಬಂದಿದೆ. ಗಡಿ ಬಂದ್ ಮಾಡಬಾರದು ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆ ಇದೆ, ಆದರೆ, ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತೇವೆ. ರಾಜ್ಯಕ್ಕೆ ತೀವ್ರತೆ ಇರುವ ವೈರಾಣು ಬಂದಿಲ್ಲ, ಆದರೆ ತೀವ್ರವಾಗಿ ಹರಡುವ ವೈರಾಣು ಬಂದಿದೆ ಎಂದರು.

 

error: Content is protected !!