ಸಿಎಂ ಆರೋಗ್ಯ ಹೇಗಿದೆ ಎಂದ ಡಿಕೆಶಿ :ಪರಸ್ಪರ ಆರೋಗ್ಯ ವಿಚಾರಿಸಿಕೊಂಡ ಹಾಲಿ-ಮಾಜಿ ಸಿಎಂಗಳು - BC Suddi
ಸಿಎಂ ಆರೋಗ್ಯ ಹೇಗಿದೆ ಎಂದ ಡಿಕೆಶಿ :ಪರಸ್ಪರ ಆರೋಗ್ಯ ವಿಚಾರಿಸಿಕೊಂಡ ಹಾಲಿ-ಮಾಜಿ ಸಿಎಂಗಳು

ಸಿಎಂ ಆರೋಗ್ಯ ಹೇಗಿದೆ ಎಂದ ಡಿಕೆಶಿ :ಪರಸ್ಪರ ಆರೋಗ್ಯ ವಿಚಾರಿಸಿಕೊಂಡ ಹಾಲಿ-ಮಾಜಿ ಸಿಎಂಗಳು

ಬೆಂಗಳೂರು ರಾಜ್ಯಪಾಲರು ಕರೆದ ವಿಡಿಯೋ ಸಂವಾದದಲ್ಲಿ ಹಾಲಿ-ಮಾಜಿ ಸಿಎಂಗಳು ಪರಸ್ಪರ ಆರೋಗ್ಯ ವಿಚಾರಿಸಿಕೊಂಡರು. ಅಲ್ಲದೇ ವಿವಿಧ ಪಕ್ಷದ ನಾಯಕರು ಸಹ ಸಿಎಂ ಹಾಗೂ ಹೆಚ್​ಡಿಕೆ ಆರೋಗ್ಯ ವಿಚಾರಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ನಿಯಂತ್ರಣ ಹಾಗೂ ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಕರೆದಿರುವ ವಿಡಿಯೋ ಸಂವಾದ ಆರಂಭದ ಕೆಲ ನಿಮಿಷಗಳು ಆರೋಗ್ಯ ವಿಚಾರಣೆಗೆ ಮೀಸಲಾಯಿತು.

ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಸ್ಪತ್ರೆಯಿಂದಲೇ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಹಾಲಿ-ಮಾಜಿ ಸಿಎಂಗಳು ಪರಸ್ಪರ ಆರೋಗ್ಯ ವಿಚಾರಿಸಿಕೊಂಡರೆ, ಉಳಿದ ನಾಯಕರು ಸಹ ಇವರ ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆದರು.

ರಾಜ್ಯಪಾಲರ ಜೊತೆ ವಿಡಿಯೋ ಸಂವಾದದ ಆರಂಭದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಿದರು. ನಿಮ್ಮ ಮುಖದಲ್ಲಿ ನಗು ಇದೆ, ನನಗೆ ಖುಷಿ ಆಯ್ತು ಎಂದು ಸಹ ಹೇಳಿದರು. ಬೇಗ ಹುಷಾರಾಗಿ ಬನ್ನಿ, ನಿಮಗೆ ಒಳ್ಳೆಯದಾಗಲಿ. ಉಸಿರಾಟದ ಸಮಸ್ಯೆ ಇದೆಯಾ ಅಂತ ಸಿಎಂ ಅವರನ್ನು ವಿಚಾರಿಸಿದರು.

ಆ ತರಹದ ಸಮಸ್ಯೆಯಿಲ್ಲ ಅಂದ ಸಿಎಂಗೆ, ಉಪ ಚುನಾವಣೆಯಿಂದ ಸುಸ್ತಾಗಿದ್ದೀರಾ, ನನಗೂ ಎರಡು ದಿನ ಸುಸ್ತು ಇತ್ತು ಅಂದಾಗ, ಡಿಕೆಶಿಯಿಂದ ಬಹಳ ಕಲಿಯುವುದು ಇದೆ ಅಂತ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾಲೆಳೆದರು. ಹೌದು ಡಿಕೆಶಿ ಅವರ ಬಳಿ ಕಲಿಯುವುದು ಇದೆ. ಹೊರಟ್ಟಿ ಅವರೇ ಎಂದು ಹೇಳಿ ಸಿಎಂ ಯಡಿಯೂರಪ್ಪ ನಕ್ಕರು. ಇದೇ ಸಂದರ್ಭ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ನಾನು ಆರಾಮಾಗಿದ್ದೇನೆ, ಆಸ್ಪತ್ರೆಯಲ್ಲಿದ್ದೇನೆ ಸರ್ ಎಂದರು.