ಸಾರ್ವಜನಿಕರು ಕೊರೊನಾ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು: ಸಚಿವ ಜಗದೀಶ ಶೆಟ್ಟರ್ - BC Suddi
ಸಾರ್ವಜನಿಕರು ಕೊರೊನಾ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು: ಸಚಿವ ಜಗದೀಶ ಶೆಟ್ಟರ್

ಸಾರ್ವಜನಿಕರು ಕೊರೊನಾ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು: ಸಚಿವ ಜಗದೀಶ ಶೆಟ್ಟರ್

ಧಾರವಾಡ: ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿರುವಂತೆ ಕೊರೊನಾ ಮೊದಲ ಅಲೆಗಿಂತಲೂ 2ನೇ ಅಲೆ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ಕೊರೊನಾ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು. ಸರ್ಕಾರ ಸೂಚಿಸುವ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಬೃಹತ್ ಮಧ್ಯಮ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರವಾರ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷ ಇದೇ ಮಾರ್ಚ್ ಏಪ್ರೀಲ್ ಅವಧಿಯಲ್ಲಿ ಕೊರೊನಾದ ಆರಂಭದ ಪ್ರಕರಣಗಳು ಕಾಣಿಸಿಕೊಂಡಾಗ ಸಾರ್ವಜನಿಕರು ವಹಿಸಿದ ಮುನ್ನೆಚ್ಚರಿಕೆ ಮಾದರಿಯಲ್ಲಿಯೇ ಈಗಲೂ ಮುಂದುವರೆಯಬೇಕು. ಕೊರೊನಾ ವೈರಾಣುವನ್ನು ನಿರ್ಲಕ್ಷಿಸಬಾರದು. ತಜ್ಞರು ಅಭಿಪ್ರಾಯಪಟ್ಟಿರುವಂತೆ ಕೋವಿಡ್ ಮೊದಲ ಅಲೆಗಿಂತಲೂ 2ನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಪೂರೈಸಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನು 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ವರ್ಧನೆಯಾಗಲಿದೆ. ಆರೋಗ್ಯಪೂರ್ಣ ಜೀವನ ನಿರ್ವಹಣೆಗೆ ಸುಲಭವಾಗಲಿದೆ ಎಂದರು.

ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಈ ಹಿಂದೆ ಕೊರೊನಾ ನಿರ್ವಹಣೆಗೆ ತೋರಿದ ಉತ್ತಮ ಕಾರ್ಯಕ್ಷಮತೆಯನ್ನು ಈಗಲೂ ಚುರುಕುಗೊಳಿಸಬೇಕು. ಕೋವಿಡ್ ತಪಾಸಣೆ ಮತ್ತು ಲಸಿಕೆ ಹಾಕಲು ಸರ್ಕಾರ ನಿಗದಿಪಡಿಸುವ ಗುರಿಯನ್ನು ಜಿಲ್ಲೆಯು ಸಾಧಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಡ್ ಏರಿಕೆಯಾಗುತ್ತಿದೆ. ಜಿಲ್ಲಾಸ್ಪತ್ರೆ, ಕಿಮ್ಸ್ ಸೇರಿದಂತೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಾಕಷ್ಟು ಹಾಸಿಗೆ ಹಾಗೂ ವೆಂಟಿಲೇಟರ್‍ಗಳ ವ್ಯವಸ್ಥೆ ಸದಾ ಸಿದ್ಧವಿರಬೇಕು. ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ನಿರಂತರವಾಗಿ ಲಸಿಕೆಯನ್ನು ಪೂರೈಸುತ್ತಿದೆ. ಈ ಲಸಿಕೆಯನ್ನು ಅರ್ಹರಿಗೆ ತಲುಪಿಸಲು ವ್ಯಾಪಕವಾಗಿ ಪ್ರಯತ್ನಗಳು ನಡೆಯಬೇಕು ಎಂದರು.

error: Content is protected !!