ಬಂಗಾಳವು ಯಾರದ್ದೇ ಆಸ್ತಿಯೂ ಅಲ್ಲ : ದೀದಿ ವಿರುದ್ಧ ಮೋದಿ ಕಿಡಿ - BC Suddi
ಬಂಗಾಳವು ಯಾರದ್ದೇ ಆಸ್ತಿಯೂ ಅಲ್ಲ : ದೀದಿ ವಿರುದ್ಧ ಮೋದಿ ಕಿಡಿ

ಬಂಗಾಳವು ಯಾರದ್ದೇ ಆಸ್ತಿಯೂ ಅಲ್ಲ : ದೀದಿ ವಿರುದ್ಧ ಮೋದಿ ಕಿಡಿ

ಕೋಲ್ಕತ್ತ: ಪಂಚರಾಜ್ಯಗಳ ಚುನಾವಣೆಯಲ್ಲಿ ಪ.ಬಂಗಾಳದ ಸೀತಾಲಕುಚ್ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕೇಂದ್ರೀಯ ಪಡೆಯ ಸಿಬ್ಬಂದಿ ಗೋಲಿಬಾರ್ ನಡೆಸಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹರಿಹಾಯ್ದಿದ್ದಾರೆ.   

ಕೇಂದ್ರೀಯ ಪಡೆಗಳ ಮೇಲೆ ದಾಳಿ ನಡೆಸುವಂತೆ ಜನರಿಗೆ ಮಮತಾ ಕುಮ್ಮಕ್ಕು ನೀಡಿದ್ದಾರೆ. ಹಿಂಸಾಚಾರವು ಕಳೆದ ಹತ್ತು ವರ್ಷಗಳ ದುರಾಡಳಿತದಿಂದ ಅವರನ್ನು ರಕ್ಷಿಸದು ಎಂದೂ ಮೋದಿ ಹೇಳಿದ್ದಾರೆ. ‘ಕೇಂದ್ರೀಯ ಪಡೆಗಳ ಸಿಬ್ಬಂದಿಗೆ ಮುತ್ತಿಗೆ ಹಾಕುವುದು ಮತ್ತು ಅವರ ಮೇಲೆ ಹಲ್ಲೆ ನಡೆಸುವುದು ಹೇಗೆ ಎಂದು ದೀದಿ (ಮಮತಾ) ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ತರಬೇತಿ ನೀಡುತ್ತಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುವ ವಿಧಾನವು ನಿಮ್ಮ ರಕ್ಷಣೆಗೆ ಬಾರದು’ ಎಂದು ಸಿಲಿಗುರಿಯಲ್ಲಿ ನಡೆಸಿದ ಪ್ರಚಾರ ಭಾಷಣದಲ್ಲಿ ಮೋದಿ ಹೇಳಿದ್ದಾರೆ. ‘ಭಯೋತ್ಪಾದಕರು ಮತ್ತು ನಕ್ಸಲರ ಬಗ್ಗೆ ಭದ್ರತಾ ಪಡೆಗಳಿಗೆ ಭಯ ಇಲ್ಲ. ಹಾಗಿರುವಾಗ ನಿಮ್ಮ ಬೆದರಿಕೆ ಮತ್ತು ಗೂಂಡಾಗಳಿಗೆ ಅವರು ಹೆದರುತ್ತಾರೆ ಎಂದು ನೀವು ಹೇಗೆ ಭಾವಿಸಿದಿರಿ’ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ.

‘ದೀದಿ ಅವರೇ, ನೀವು ಬಂಗಾಳದ ಭಾಗ್ಯ ವಿಧಾತ ಅಲ್ಲ. ಬಂಗಾಳವು ಯಾರದ್ದೇ ಆಸ್ತಿಯೂ ಅಲ್ಲ. ನೀವು ಹೋಗಬೇಕು ಎಂಬುದನ್ನು ಬಂಗಾಳದ ಜನರು ನಿರ್ಧರಿಸಿದ್ದಾರೆ. ನಿಮ್ಮನ್ನು ಹೊರಗೆ ಅಟ್ಟಲು ಅವರು ತೀರ್ಮಾನಿಸಿದ್ದಾರೆ. ನೀವು ಮತ್ತು ನಿಮ್ಮ ಇಡೀ ಗ್ಯಾಂಗ್ ಅನ್ನು ಹೊರಗೆ ಹಾಕಲಾಗುವುದು’ ಎಂದು ಮೋದಿ ಹೇಳಿದ್ದಾರೆ.