ದೇಶದಲ್ಲೇ ಮೊದಲು: ಹೈದರಾಬಾದ್​ ಮೃಗಾಲಯದ 8 ಸಿಂಹಗಳಿಗೆ ಕೊರೊನಾ ಪಾಸಿಟಿವ್ - BC Suddi
ದೇಶದಲ್ಲೇ ಮೊದಲು: ಹೈದರಾಬಾದ್​ ಮೃಗಾಲಯದ 8 ಸಿಂಹಗಳಿಗೆ ಕೊರೊನಾ ಪಾಸಿಟಿವ್

ದೇಶದಲ್ಲೇ ಮೊದಲು: ಹೈದರಾಬಾದ್​ ಮೃಗಾಲಯದ 8 ಸಿಂಹಗಳಿಗೆ ಕೊರೊನಾ ಪಾಸಿಟಿವ್

ಹೈದರಾಬಾದ್​: ಇಲ್ಲಿನ ನೆಹರೂ ಜೂಲಾಜಿಕಲ್ ಪಾರ್ಕ್​ನಲ್ಲಿರುವ ಎಂಟು ಸಿಂಹಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಪ್ರಾಣಿಗಳಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.

ಎಂಟು ಸಿಂಹಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಏಪ್ರಿಲ್​ 29ರಂದು ಅವುಗಳ ಗಂಟಲುದ್ರವದ ಮಾದರಿ ಸಂಗ್ರಹಿಸಿ, ಆರ್​ಟಿ-ಪಿಸಿಆರ್​​ ಟೆಸ್ಟ್​ ಮಾಡಿಸಲಾಗಿತ್ತು. ಅದರ ವರದಿ ಈಗ ಬಂದಿದ್ದು ಎಲ್ಲ ಪ್ರಾಣಿಗಳಲ್ಲೂ ಸೋಂಕು ದೃಢಪಟ್ಟಿದೆ. ನಮ್ಮ ದೇಶದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಇದೇ ಮೊದಲಬಾರಿಗೆ ಆದರೂ, ಬೇರೆ ಕೆಲವು ದೇಶಗಳಲ್ಲಿ ಕಳೆದ ವರ್ಷವೇ ಇಂಥ ಕೇಸ್​ಗಳು ವರದಿಯಾಗಿವೆ.

ಸದ್ಯ ಎಲ್ಲ ಸಿಂಹಗಳನ್ನು ಸಂಪೂರ್ಣವಾಗಿ ಐಸೋಲೇಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಿಂಹಗಳೂ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಈ ನೆಹರೂ ಜೂಲಾಜಿಕಲ್​ ಪಾರ್ಕ್​ನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಾರ್ವಜನಿಕರ ವೀಕ್ಷಣೆಗೂ ನಿರ್ಬಂಧ ಹೇರಲಾಗಿದೆ. ಮೃಗಾಲಯದ ಸಿಬ್ಬಂದಿ ಸಿಂಹಗಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.