ತಮಿಳುನಾಡು ವಿಧಾನಸಭೆ ಚುನಾವಣೆ; ನಟಿ ಖುಷ್ಬೂಸುಂದರ್ ನಾಮಪತ್ರ ಸಲ್ಲಿಕೆ - BC Suddi
ತಮಿಳುನಾಡು ವಿಧಾನಸಭೆ ಚುನಾವಣೆ; ನಟಿ ಖುಷ್ಬೂಸುಂದರ್ ನಾಮಪತ್ರ ಸಲ್ಲಿಕೆ

ತಮಿಳುನಾಡು ವಿಧಾನಸಭೆ ಚುನಾವಣೆ; ನಟಿ ಖುಷ್ಬೂಸುಂದರ್ ನಾಮಪತ್ರ ಸಲ್ಲಿಕೆ

ಚೆನ್ನೈ: ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ತಮಿಳುನಾಡು ಚುನಾವಣೆಯಲ್ಲಿ ಕಣಕ್ಕಿಳಿದಿದ್ದು, ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರೊಂದಿಗೆ ವಲ್ಲುವರ್ ಕೊಟ್ಟಂ ಬಳಿ ರೋಡ್ ಶೋದಲ್ಲಿ ಆಗಮಿಸಿ ಖುಷ್ಬೂ ನಾಮಪತ್ರ ಸಲ್ಲಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಖುಷ್ಬೂ, “ನಾನು ಗೆಲ್ಲುವ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಎನ್‌ಡಿಎ ಹಾಗೂ ಇತರೆ ಮಿತ್ರ ಪಕ್ಷಗಳು ನಮ್ಮೊಂದಿಗಿವೆ. ಸೆಲ್ವಂ ಸರ್ ಅವರಿಗೆ ಧನ್ಯವಾದ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ” ಎಂದು ಹೇಳಿದ್ದಾರೆ.

ನಟ ರಜನೀಕಾಂತ್ ಅವರ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅವರು ಸಾರ್ವಜನಿಕವಾಗಿ ನನಗೆ ಬೆಂಬಲ ವ್ಯಕ್ತಪಡಿಸಬೇಕಿಲ್ಲ. ರಜನಿ ನನಗೆ ಒಳ್ಳೆಯ ಸ್ನೇಹಿತ. ಹೃದಯದಿಂದ ನನಗೆ ಆಶೀರ್ವಾದ ನೀಡುತ್ತಾರೆ” ಎಂದು ಹೇಳಿದ್ದಾರೆ.

ಡಿಎಂಕೆ ಪಕ್ಷದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದ ಖುಷ್ಬೂ 2014ರಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದರು. 2020 ಅಕ್ಟೋಬರ್ ತಿಂಗಳಿನಲ್ಲಿ ಬಿಜೆಪಿ ಸೇರಿ, ಇದೀಗ ಡಿಎಂಕೆ ಅಭ್ಯರ್ಥಿ ಡಾ. ಎಳಿಲನ್ ವಿರುದ್ಧ ಕಣದಲ್ಲಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಬಿಜೆಪಿ ಜೊತೆ ಮೈತ್ರಿಯಲ್ಲಿದ್ದು, ಸಿಎಂ ಪಳನಿಸ್ವಾಮಿ ಎಡಪ್ಪಾಡಿಯಿಂದ ಸ್ಪರ್ಧಿಸಲಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್ 6ರಂದು 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

error: Content is protected !!