ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ಪ್ರಮುಖ ಕಾರ್ಪೊರೇಟ್ ಕಂಪೆನಿಗಳ ಕಾರ್ಯನಿರ್ವಾಹಕರನ್ನು ಉದ್ದೇಶಿಸಿ ಮಾತನಾಡಿದ್ದು, ಭಾರತವು ವ್ಯಾಪಕ ಶ್ರೇಣಿಯ ಸಾಧ್ಯತೆಗಳನ್ನು ಒದಗಿಸುತ್ತದೆ ಎಂದಿದ್ದಾರೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಆತ್ಮ ನಿರ್ಭರ ಭಾರತ್ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ವಾಷಿಂಗ್ಟನ್, ಡಿಸಿಯಲ್ಲಿ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ವಾರ್ಷಿಕ ಸಭೆಗಳಲ್ಲಿ ಭಾಗಿಯಾಗಲು ತೆರಳಿದ್ದಾರೆ. ಭಾರತದಲ್ಲಿ ಉಪಸ್ಥಿತರಿರುವ ಮತ್ತು ದೇಶದ ಹೂಡಿಕೆಯ ನಿರೀಕ್ಷೆಗಳನ್ನು ಬಂಡವಾಳ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಹಲವಾರು ಉನ್ನತ ಅಮೆರಿಕನ್ ಸಿಇಒಗಳನ್ನು ನಿರ್ಮಲಾ ಭೇಟಿಯಾಗುತ್ತಿದ್ದಾರೆ. ಸಚಿವಾಲಯದ ಪ್ರಕಾರ, ಆ್ಯಮ್​ವೇ ಸಿಇಒ ಮಿಲಿಂದ್ ಪಂತ್ ಅವರೊಂದಿಗಿನ ಸಭೆಯಲ್ಲಿ ಸಂವಾದದ ಗಮನವು ಸಂಶೋಧನೆ ಮತ್ತು ಅಭಿವೃದ್ಧಿ, ಕಾರ್ಖಾನೆ ಆಟೊಮೇಷನ್, ನಾವೀನ್ಯತೆ ಮತ್ತು ಪೌಷ್ಠಿಕಾಂಶ ವಿಭಾಗದ ಮೇಲೆ ಇತ್ತು.

ತಮ್ಮ ಚರ್ಚೆಯ ಸಮಯದಲ್ಲಿ ಹಣಕಾಸು ಸಚಿವೆ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್‌ನಂತಹ ಉಪಕ್ರಮಗಳನ್ನು ಉಲ್ಲೇಖಿಸಿದ್ದಾರೆ. ಸರ್ಕಾರದಿಂದ ಇತ್ತೀಚೆಗೆ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸಲಾಯಿತು ಮತ್ತು ಗುಜರಾತ್‌ನ GIFT ನಗರದ ಬಗ್ಗೆ ಹಲವಾರು ನಿರೀಕ್ಷೆಗಳನ್ನು ಇರಿಸಿಕೊಳ್ಳಲಾಗಿದೆ. 1998ರಿಂದ ಭಾರತದಲ್ಲಿ ಕಂಪೆನಿಗಳ ಉಪಸ್ಥಿತಿ ಮತ್ತು ಯಶಸ್ಸನ್ನು ಸಚಿವರು ಒತ್ತಿಹೇಳಿದ್ದಾರೆ. ಜೊತೆಗೆ ಮುಂದಿನ ವರ್ಷಗಳಲ್ಲಿ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಕೌಶಲ, ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನಾ ಆಟೊಮೇಷನ್, ನಾವೀನ್ಯತೆ ಮತ್ತು ಏರೋಸ್ಪೇಸ್ ಕ್ಷೇತ್ರಗಳೆಲ್ಲವನ್ನೂ ಬೋಯಿಂಗ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಬಿ. ಮಾರ್ಕ್ ಅಲೆನ್ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಯಿತು. ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ್ ಯೋಜನೆಗಳಲ್ಲಿ ಬೋಯಿಂಗ್‌ನ ಒಳಗೊಳ್ಳುವಿಕೆ ಹಾಗೂ ಭವಿಷ್ಯದಲ್ಲಿ ಹೂಡಿಕೆ ಮಾಡುವ ಕಂಪೆನಿಯ ಬಯಕೆಯನ್ನು ಅವರು ಒತ್ತಿ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ಕ್ಷೇತ್ರ ಸುಧಾರಣೆಯತ್ತ ಭಾರತದ ಪ್ರಮುಖ ಪ್ರಯತ್ನಗಳನ್ನು ವೈದ್ಯಕೀಯ ವಿಜ್ಞಾನ, ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಗುಜರಾತ್‌ನ ಜಿಐಎಫ್‌ಟಿ ನಗರದಲ್ಲಿ ಹೆಚ್ಚುತ್ತಿರುವ ಸಾಮರ್ಥ್ಯವನ್ನು ನೋವಾಕ್ಸ್ ಸಿಇಒ ಸ್ಟಾನ್ಲಿ ಎರ್ಕ್‌ನೊಂದಿಗೆ ವಿವರಿಸಿದ್ದಾರೆ. ಪ್ರಮುಖ ಯುಎಸ್ ಇಂಡಿಯಾ ಬಿಜಿನೆಸ್ ಕೌನ್ಸಿಲ್ ಸದಸ್ಯರು ಭಾರತದ ಸುಧಾರಣಾ ಪಥವನ್ನು ಶ್ಲಾಘಿಸಿದ್ದು, ದೇಶದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಾವು ಅವರ ಸುಧಾರಣೆಯ ಪಥವನ್ನು ಪ್ರಶಂಸಿಸಿದ್ದೇವೆ ಮತ್ತು ಯುನೈಟೆಡ್ ಸ್ಟೇಟ್ಸ್ ಹಾಗೂ ಭಾರತದ ನಡುವಿನ ವ್ಯಾಪಾರ ಸಂಪರ್ಕವನ್ನು ಸುಧಾರಿಸುವ ಹೊಸ ಸಾಮರ್ಥ್ಯವನ್ನು ಚರ್ಚಿಸಿದ್ದೇವೆ,” ಎಂದು ಯುಎಸ್ಐಬಿಸಿ ಸಿಐಐ ಜೊತೆಗೆ ಸಂವಾದ ನಂತರ ಹೇಳಲಾಯಿತು. ಭವಿಷ್ಯದ ಬೆಳವಣಿಗೆಯ ಗುರಿಯನ್ನು ಹಾಕಿದ್ದಕ್ಕಾಗಿ ವ್ಯಾಪಾರದ ಕಾರ್ಯನಿರ್ವಾಹಕರು ಸಚಿವರನ್ನು ಹೊಗಳಿದ್ದು, ಕೊವಿಡ್ -19 ಸಾಂಕ್ರಾಮಿಕದ ಮಧ್ಯೆಯೂ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಭಾರತೀಯ ಸರ್ಕಾರವನ್ನು ಅಭಿನಂದಿಸಿದ್ದಾರೆ. ವರದಿಯ ಪ್ರಕಾರ, ಕಾರ್ಪೊರೇಟ್ ನಾಯಕರು ಭಾರತದಲ್ಲಿ ತಮ್ಮ ಹೂಡಿಕೆಗಳನ್ನು ವಿಸ್ತರಿಸುವ ಬಲವಾದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.