ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕಾಗಿ ಬಿಜೆಪಿ ಬದ್ದ : ನರೇಂದ್ರ ಮೋದಿ - BC Suddi
ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕಾಗಿ ಬಿಜೆಪಿ ಬದ್ದ : ನರೇಂದ್ರ ಮೋದಿ

ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕಾಗಿ ಬಿಜೆಪಿ ಬದ್ದ : ನರೇಂದ್ರ ಮೋದಿ

ಬೋಕಾಖಾತ್: ಅಸ್ಸಾಂನಲ್ಲಿ ಎರಡನೇ ಬಾರಿ ಎನ್​ಡಿಎ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಬೋಕಾಖಾತ್​ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಮೋದಿ, ಭಾಷಣವನ್ನು ಅಸ್ಸಾಮೀಸ್ ಭಾಷೆಯಲ್ಲಿ ಆರಂಭಿಸಿದ್ದಾರೆ. ಅಸ್ಸಾಂನಲ್ಲಿ ‘ಡಬಲ್ ಎಂಜಿನ್ ಕೀ ಸರ್ಕಾರ’ ಬರಲಿದೆ. ‘ದೂಸ್ ರೀ ಬಾರ್ ಬಿಜೆಪಿ ಸರ್ಕಾರ’ (ಎರಡನೇ ಬಾರಿ ಬಿಜೆಪಿ ಸರ್ಕಾರ) ಎಂದು ಮೋದಿ ಹೇಳಿದ್ದಾರೆ. ಎನ್​ಡಿಎ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್, ಎಲ್​ಪಿಜಿ, ವಿದ್ಯುತ್ ಮತ್ತು ಉಚಿತ ಆರೋಗ್ಯ ವ್ಯವಸ್ಥೆಯನ್ನು ರಾಜ್ಯದ ಜನರಿಗೆ ನೀಡಿದೆ. ಈ ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಖಡ್ಗಮೃಗಗಳನ್ನು ರಕ್ಷಿಸಲು ವಿಫಲವಾಗಿತ್ತು. ಆದರೆ ಎನ್ಡಿಎ ಸರ್ಕಾರ ಖಡ್ಗಮೃಗಗಳನ್ನು ಕಾಪಾಡಿದೆ. ಬ್ರಹ್ಮಪುತ್ರಾ ನದಿಗೆ ಕಟ್ಟಲಾದ ಚತುಷ್ಪಥ ಸೇತುವೆಯು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಿದೆ. ರಾಜ್ಯದಲ್ಲಿ ಎನ್ ಡಿಎ ಆಡಳಿತಾವಧಿಯಲ್ಲಿ ಮೌಲಸೌಕರ್ಯಗಳು ಹೆಚ್ಚಿವೆ ಎಂದಿದ್ದಾರೆ ಮೋದಿ.

ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದ ಪ್ರಧಾನಿ ಮೋದಿ, ರಾಜ್ಯದಲ್ಲಿ ತೈಲ ಮತ್ತು ಪೆಟ್ರೊಲಿಯಂ ವಲಯದ ಅಭಿವೃದ್ಧಿಗಾಗಿ ₹40,000 ಕೋಟಿ ಹೂಡಿಕೆ ಮಾಡಲಾಗಿದೆ. ತೈಲ ಸಂಸ್ಕರಣಾ ಘಟಕಗಳಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು ಡಬಲ್ ಎಂಜಿನ್ ಸರ್ಕಾರ ಹೂಡಿಕೆಯ ಮಹಾಪೂರವೇ ಹರಿದು ಬರುವಂತೆ ಮಾಡಿದೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಸ್ಸಾಂನ್ನು ಕಡೆಗಣಿಸಲಾಗಿತ್ತು, ಇಲ್ಲಿ ಭ್ರಷ್ಟಾಚಾರ ಹೆಚ್ಚಿತ್ತು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಸ್ಸಾಂನ ಅಭಿವೃದ್ಧಿ ಮಾಡಿದೆ. ಕಾಂಗ್ರೆಸ್ ಅಂದರೆ ಗೊಂದಲ. ಕಾಂಗ್ರೆಸ್ ಅಂದರೆ ಬಾಂಬ್, ಬಂದೂಕು ಮತ್ತು ದಿಗ್ಬಂಧನ. ಅಸ್ಸಾಂನ ಜನರು ‘ಲೂಟ್ ಕಾ ಇಂಜಿನ್’ ಕಾಂಗ್ರೆಸ್ ಪಕ್ಷವನ್ನು ದೂರವಿರಿಸಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.

ಅಸ್ಸಾಂನ ಚಹಾ ತೋಟದ ಕಾರ್ಮಿಕರ ಅಭಿವೃದ್ಧಿ ಬಗ್ಗೆ ಮಾತನಾಡಿದ ಮೋದಿ, ಕಾಂಗ್ರೆಸ್ ಚಹಾ ರಾಜಕಾರಣ ಮಾಡಿತ್ತು. ಆದರೆ ಎನ್​ಡಿಎ ಸರ್ಕಾರ ಶಿಕ್ಷಣ, ಕೆಲಸ, ಔಷಧಿಗಳನ್ನು ಚಹಾ ತೋಟದ ಕಾರ್ಮಿಕರಿಗೆ ಒದಗಿಸಿದೆ. ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಬದ್ಧವಾಗಿದೆ. 2021-2022ರ ಸಾಲಿನ ಕೇಂದ್ರ ಬಜೆಟ್ ನಲ್ಲಿ ಅಸ್ಸಾಂ ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕಾಗಿ ₹1,000ಕೋಟಿಗಿಂತಲೂ ಹೆಚ್ಚು ಹಣ ಮೀಸರಿಲಿಸಿದೆ. ಇಲ್ಲಿನ ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಕಠಿಣ ಪರಿಶ್ರಮ ನಡೆಸಿದೆ ಎಂದು ಮೋದಿ ಹೇಳಿದ್ದಾರೆ.

ಅಸ್ಸಾಂ ವಿಧಾನಸಭೆ ಚುನಾವಣೆಗಾಗಿ ಮೊದಲ ಹಂತರದ ಚುನಾವಣೆ ಮಾರ್ಚ್ 27ರಂದು ನಡೆಯಿದ್ದು, ಏಪ್ರಿಲ್ 6ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

error: Content is protected !!