ಶಿರಸಿ: ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಪಾಲಕರ ಕಣ್ತಪ್ಪಿಸಿ ಕಾಡಿನಲ್ಲಿ ಅಡಗಿ ಕುಳಿತು ಅತ್ಯಾಚಾರದ ನಾಟಕವಾಡಿದ ವಿದ್ಯಾರ್ಥಿನಿಯ ಅಸಲಿಯತ್ತನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಬಯಲುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ನಡೆದಿದೆ.

ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆಯಲ್ಲಿ ಸರಿಯಾಗಿ ಹೋಮ್ ವರ್ಕ್ ಮಾಡೋದಿಲ್ಲ ಅಂತ ಮುಖ್ಯ ಶಿಕ್ಷಕರು ಪಾಲಕರಿಗೆ ದೂರು ನೀಡಿದ್ದರು. ಹೀಗಾಗಿ ವಿದ್ಯಾರ್ಥಿನಿಯನ್ನ ಪಾಲಕರು ತರಾಟೆ ತೆಗೆದುಕೊಂಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಮನೆಯ ಹಿಂಭಾಗದಲ್ಲಿರೋ ಕಾಡಿನಲ್ಲಿ ಅವಿತು ಕುಳಿತಿದ್ದಳು.

ಮಗಳು ಕಾಣಿಸದಿರುವುದರಿಂದ ಗಾಬರಿಗೊಂಡ ಪೋಷಕರು ಅಪಹರಣವಾಗಿರಬೇಕು ಅಂತ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಕಾಡಿನಲ್ಲಿ ಹುಡುಕಿದಾಗ ವಿದ್ಯಾರ್ಥಿನಿ ತಾನೇ ಕೈ ಕಾಲುಗಳಿಗೆ ಹಗ್ಗ ಸುತ್ತಿಕೊಂಡು ಅತ್ಯಾಚಾರದ ಕಥೆ ಹೆಣೆದಿದ್ದಳು.

ವಿದ್ಯಾರ್ಥಿನಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರವಾಗಿಲ್ಲ ಅಂತ ವರದಿ ಬಂದಿದ್ದು ತನಿಖೆ ನಡೆಸಿದಾಗ ಈಕೆಯ ಬಣ್ಣ ಬಯಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.