ಬೆಂಗಳೂರು: ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ರಾಜಕಾರಣಿಗಳಿಗೆ ಹನಿಟ್ರ್ಯಾಪ್ ಬಲೆ ಬೀಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಯಾಂಗಿನಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುಮಾರು ವರ್ಷಗಳಿಂದ ಇದೇ ದಂಧೆಯಲ್ಲಿ ತೊಡಗಿದ್ದಳು ಎನ್ನಲಾದ ವಿದ್ಯಾ ಎಂಬಾಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಹೈಪ್ರೊಫೈಲ್ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಚೆಂದುಳ್ಳಿ ಚೆಲುವೆ ನಂತರ ಅವರನ್ನು ಬಲೆಗೆ ಬೀಳಿಸಿಕೊಂಡು ಖಾಸಗಿ ಸಮಯದ ವಿಡಿಯೋ ಮಾಡಿಕೊಳ್ಳುತ್ತಿದ್ದಳು. ನಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈಕೆ ದೆಹಲಿ ನಾಯಕರವರೆಗೂ ಲಿಂಕ್ ಇಟ್ಟುಕೊಂಡಿದ್ದಳು. ಜತೆಗೆ ಈಕೆಯನ್ನು ತಮಿಳುನಾಡು ಕಾಂಗ್ರೆಸ್ ಪಕ್ಷದ ಇನ್‌ಚಾರ್ಜ್ ಹುದ್ದೆ ನೀಡಲಾಗಿತ್ತು ಎಂಬ ಮಾಹಿತಿ ಇದೆ. ಇತ್ತೀಚೆಗೆ ನಗರದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರ ಜೊತೆ ಸಲುಗೆ ಬೆಳೆಸಿದ್ದ ವಿದ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಈಕೆಯ ಕಾಟಕ್ಕೆ ಬೇಸತ್ತ ಕಾಂಟ್ರಾಕ್ಟರ್ ಕೊನೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದಾರೆ. ಆ ನಂತರ ಈಕೆಯ ಕರ್ಮಕಾಂಡ ಬಯಲಾಗಿದೆ.

ವಿದ್ಯಾಳನ್ನು ಅರೆಸ್ಟ್ ಮಾಡಿದ ಪೊಲೀಸರು ನಂತರ ವಿಚಾರಣೆ ನಡೆಸಿದಾಗ ಈಕೆ ಹಲವಾರು ಸರ್ಕಾರಿ ಅಧಿಕಾರಿಗಳಿಗೂ ಖೆಡ್ಡಾ ತೋಡಿದ್ದಳು ಎಂಬ ಮಾಹಿತಿ ಒಂದೊಂದಾಗಿ ಹೊರಬರುತ್ತಿದೆ.